ಮಂಗಳೂರು: ಚಿರತೆಗಾಗಿ ಮುಂದುವರಿದ ಪತ್ತೆ ಕಾರ್ಯಾಚರಣೆ

ಮಂಗಳೂರು, ಅ.5: ಮರೋಳಿ ಜಯನಗರ ವ್ಯಾಪ್ತಿಯಲ್ಲಿ ರವಿವಾರ ಚಿರತೆಯನ್ನು ಹೋಲುವ ಪ್ರಾಣಿ ಸುಳಿದಾಡಿತ್ತು. ಆ ಪ್ರಾಣಿಯನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಮಂಗಳವಾರವೂ ಕೂಂಬಿಂಗ್ (ಕಾರ್ಯಾಚರಣೆ) ಮುಂದುವರಿಸಿದ್ದು, ಬೋನು ಇಟ್ಟು ಸೆರೆಗೆ ಪ್ರಯತ್ನಿಸಿದ್ದಾರೆ.
ರವಿವಾರ ಸಂಜೆ 6:30ರ ವೇಳೆಗೆ ಜಯನಗರ 4ನೇ ಕ್ರಾಸ್‌ನಲ್ಲಿ ಚಿರತೆ ಹೋಲುವ ಪ್ರಾಣಿ ಪತ್ತೆಯಾಗಿದ್ದು, ಇದನ್ನು ನಿಧಿ ಶೆಟ್ಟಿ ಎಂಬ ಬಾಲಕಿ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಳು. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ರಾತ್ರಿಯಾದ ಕಾರಣ ಯಾವುದೇ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಸೋಮವಾರ ಈ ವ್ಯಾಪ್ತಿಯಲ್ಲಿ ಮಂಗಳೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ನೇತೃತ್ವದ ತಂಡ ಆಗಮಿಸಿ ಶೋಧ ನಡೆಸಿದಾಗ, ನಿಗೂಢ ಪ್ರಾಣಿಯ ಹೆಜ್ಜೆ ಗುರುತು ಪತ್ತೆಯಾಗಿತ್ತು. ಮಂಗಳವಾರ ಬೆಳಗ್ಗಿನಿಂದ ರಾತ್ರಿಯವರೆಗೆ ಈ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಕೆಲವೊಂದು ಸ್ಥಳದಲ್ಲಿ ಮತ್ತೆ ಓಡಾಡಿದ ಹೆಜ್ಜೆ ಪತ್ತೆಯಾಗಿದೆ.
ಬೋನು ಅಳವಡಿಕೆ: ಕಂಕನಾಡಿಯ ಕನಪದವು, ಮಾರ್ತಕಂಪೌಂಡ್, ಬಲ್ಲಾಳ್‌ಗುಡ್ಡೆ ವ್ಯಾಪ್ತಿಯಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಅದೇ ಸ್ಥಳದಲ್ಲಿ ಬೋನು ಅಳವಡಿಸಲಾಗಿದೆ. ಇದೇ ರೀತಿ ಒಂದೆರಡು ದಿನ ಕಾರ್ಯಾಚರಣೆ ನಡೆಸಲಾಗುವುದು ಎಂದು ಪ್ರಶಾಂತ್ ಪೈ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸಂಜಯ್ ಪೈ, ಉಪವಲಯ ಅರಣ್ಯಾಧಿಕಾರಿ ಸಂಜಯ್, ಅರಣ್ಯ ರಕ್ಷಕರಾದ ವೀಣಾ, ಸೋಮಲಿಂಗ ಹಿಪ್ಪರಗಿ, ಶಿವು, ಉರಗ ರಕ್ಷಕ ಅತುಲ್ ಪೈ ಭಾಗವಹಿಸಿದ್ದರು.







