ಪುತ್ತೂರಿನಲ್ಲಿ ವಕ್ಫ್ ಮತ್ತು ಅಲ್ಪ ಸಂಖ್ಯಾತರ ಇಲಾಖೆ ಮಾಹಿತಿ ಕಾರ್ಯಾಗಾರ

ಪುತ್ತೂರು: ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಶ್ರಯಲ್ಲಿ ವಕ್ಫ್ ಮತ್ತು ಅಲ್ಪ ಸಂಖ್ಯಾತರ ಇಲಾಖೆಯಿಂದ ಮಾಹಿತಿ ಕಾರ್ಯಾಗಾರ ಮಂಗಳವಾರ ಪುತ್ತೂರಿನ ಸಾಲ್ಮರ ಕೊಟೇಚಾ ಹಾಲ್‍ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಶರೀಯತ್ ಸಲಹೆಗಾರ ಎಸ್.ಬಿ. ಮುಹಮ್ಮದ್ ದಾರಿಮಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತಾಗಲು ಇಂತಹ ಮಾಹಿತಿ ಕಾರ್ಯಾಗಾರಗಳು ಉತ್ತಮ ಪ್ರೇರಣೆಯಾಗುತ್ತದೆ. ವಕ್ಫ್ ಸೊತ್ತುಗಳು ಪ್ರವಾದಿಗಳು ನೀಡಿರುವ ಉತ್ತಮ ಕೊಡುಗೆಯಾಗಿದೆ. ದೇಶದಲ್ಲಿ ಅತೀ ಹೆಚ್ಚು ವಕ್ಫ್ ಸೊತ್ತುಗಳಿದ್ದು, ಅದನ್ನು ಯಾರೂ ಮಾರಾಟ ಮಾಡುವಂತಿಲ್ಲ. ಈ ಬಗ್ಗೆ ಎಲ್ಲರೂ ಅರಿವು ಪಡೆದುಕೊಳ್ಳಬೇಕು ಎಂದರು.
ಕಾರ್ಯಾಗಾರದಲ್ಲಿ ದ.ಕ. ವಕ್ಫ್ ಅಧಿಕಾರಿ ಅಬೂಬಕ್ಕರ್, ಮಂಗಳೂರು ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಹಮ್ಮದ್ ಫಾರೂಕ್, ರಾಷ್ಟ್ರೀಯ ತರಬೇತುದಾರ ರಫೀಕ್ ಮಾಸ್ಟರ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಪುತ್ತೂರು ಮೇಲ್ವಿಚಾರಕ ಮಹಮ್ಮದ್ ರಫೀಕ್ ಕುಂಜೂರು ಮಾಹಿತಿ ನೀಡಿದರು.
ತಾಲೂಕು ಮುಸ್ಲಿಂ ಸಂಯಕ್ತ ಜಮಾಅತ್ ಅಧ್ಯಕ್ಷ ಕೆ.ಪಿ. ಮಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಎಲ್.ಟಿ. ರಝಾಕ್ ಹಾಜಿ ಸ್ವಾಗತಿಸಿದರು. ಉಪಾಧ್ಯಕ್ಷ ಖಾಸಿಂ ಹಾಜಿ ಮಿತ್ತೂರು ವಂದಿಸಿದರು. ಖಜಾಂಜಿ ಬಿ.ಎ. ಶಕೂರ್ ಹಾಜಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಸಂವಾದ ನಡೆಯಿತು. ಪುತ್ತೂರು ತಾಲೂಕಿನ ವಿವಿಧ ಮಸೀದಿಗಳ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳು ಪಾಲ್ಗೊಂಡಿದ್ದರು.







