ದಿಲ್ಲಿ ಗಲಭೆ ಪ್ರಕರಣ: ವಿಚಾರಣೆಗೆ ಪೂರ್ವಸಿದ್ಧತೆ ಇಲ್ಲದೆ ಆಗಮಿಸಿದ ಪೊಲೀಸ್ ಅಧಿಕಾರಿಗೆ ಕೋರ್ಟ್ ತರಾಟೆ

ಹೊಸದಿಲ್ಲಿ, ಫೆ.5: ಈಶಾನ್ಯ ದಿಲ್ಲಿಯಲ್ಲಿ ಕಳೆದ ವರ್ಷದ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ಹಾಜರಾಗುವ ಮುನ್ನ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳದೆ ಇದ್ದುದಕ್ಕಾಗಿ ಹಾಗೂ ತಡವಾಗಿ ಹಾಜರಾಗಿದ್ದಕ್ಕಾಗಿ ಪೊಲೀಸ್ ಅಧಿಕಾರಿಯೊಬ್ಬರನ್ನು ಸ್ಥಳೀಯ ನ್ಯಾಯಾಲಯವು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ ಹಾಗೂ ಆತನ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.
ದಿಲ್ಲಿ ಗಲಭೆಗೆ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ತನಿಖಾಧಿಕಾರಿಯೊಬ್ಬರು ಪ್ರಾಸಿಕ್ಯೂಶನ್ ಪುರಾವೆಯಾಗಿ ನ್ಯಾಯಾಲಯದಲ್ಲಿ ಹಾಜರುಪಡಿಸಲು ಉದ್ದೇಶಿಸಿದ್ದ ವಿಡಿಯೋಗಳು ಹಾಗೂ ಫೋಟೋಗಳನ್ನು ಸಂಗ್ರಹಿಸಲು ವಿಳಂಬಿಸಿದ್ದರು. ಇಂದು ಈ ವಿಷಯವಾಗಿ ಆನ್ಲೈನ್ ಮೂಲಕ ನಡೆದ ಕೋರ್ಟ್ಕಲಾಪಗಳಲ್ಲಿ ಪಾಲ್ಗೊಳ್ಳಲು ಕೂಡಾ ಈ ಅಧಿಕಾರಿ ತಡ ಮಾಡಿದ್ದರು.
‘‘ನೀವು ಸಕಾಲದಲ್ಲಿ ಕಲಾಪಗಳಲ್ಲಿ ಕೂಡಾ ಪಾಲ್ಗೊಂಡಿಲ್ಲ ಎಂದು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ತಿಳಿಸಿದರು. ‘‘ ಪುರಾವೆಗಳನ್ನು ಹಾಜರುಪಡಿಸುವುದು ನ್ಯಾಯಾಲಯ ಕರ್ತವ್ಯವಲ್ಲ. ನಿಮ್ಮ ಹೊಣೆಗಾರಿಕೆಯಾಗಿದೆ. ಕಳೆದ ಬಾರಿ ಕೂಡಾ ಕೂಡಾ ಈ ಬಗ್ಗೆ ಕೇಳಿದಾಗ, ಪುರಾವೆಗಳನ್ನು ಕಲೆಹಾಕಲು ಸಮಯ ಬೇಕಾಗುತ್ತದೆ ಎಂದಿದ್ದೀರಿ. ತನಿಖಾಧಿಕಾರಿಯೊಬ್ಬರಿಂದ ಇಂತಹ ನಡವಳಿಕೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ಬಗ್ಗೆ ನಾನು ಆದೇಶ ನೀಡಬೇಕಾಗಿ ಬರುವಂತಹ ಪರಿಸ್ಥಿತಿಯನ್ನುಂಟು ಮಾಡದಿರಿ ’’ ಎಂದು ನ್ಯಾಯಾಧೀಶರು ಅಸಮಾಧಾನದಿಂದ ಹೇಳಿದರು.
2020ರ ಫೆಬ್ರವರಿಯಲ್ಲಿ ಈಶಾನ್ಯದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಘಟನೆಗಳ ತನಿಖೆಯ ನಿರ್ವಹಣೆಯಲ್ಲಿನ ಲೋಪಗಳಿಗಾಗಿ ದಿಲ್ಲಿಯ ಹಲವಾರು ನ್ಯಾಯಾಲಯಗಳು ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದವು.
ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಿಗರು ಹಾಗೂ ಸಂಘಪರಿವಾರದ ಬೆಂಬಲಿಗರ ನಡುವೆ 2020ರ ಫೆಬ್ರವರಿ 23 ಹಾಗೂ 26ರಂದು ಈಶಾನ್ಯ ದಿಲ್ಲಿಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಕನಿಷ್ಠ 53 ಮಂದಿ ಮೃತಪಟ್ಟಿದ್ದರು ಹಾಗೂ ನೂರಾರು ಮಂದಿ ಗಾಯಗೊಂಡಿದ್ದರು.
ಕಳೆದ ತಿಂಗಳು ಈಶಾನ್ಯ ದಿಲ್ಲಿ ಗಲಭೆಗೆ ಸಂಬಂಧಿಸಿದ ಪ್ರಕರಣದ ಆಲಿಕೆಯ ಸಂದರ್ಭ ಗೈರುಹಾಜರಾದುದಲ್ಲದೆ, ವಿಚಾರಣೆ ಮುಂದೂಡುವತೆ ಕೋರಿದ್ದ ಪೊಲೀಸ್ ಅಧಿಕಾರಿಯ ವೇತನದಿಂದ 5 ಸಾವಿರ ರೂ. ಕಡಿತಗೊಳಿಸುವಂತೆ ಹಾಗೂ ಆತನ ವಿರುದ್ಧ ತನಿಖೆ ನಡೆಸುವಂತೆ ದಿಲ್ಲಿಯ ಮುಖ್ಯಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಗಾರ್ಗ್ಅವರು ದಿಲ್ಲಿ ಪೊಲೀಸ್ ಆಯುಕ್ತರಿಗೆ ಆದೇಶ ನೀಡಿದ್ದರು.