ಕಬ್ಬಿಗೆ ದರ ನಿಗದಿಗೆ ಕ್ರಮ: ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ

ಬೆಂಗಳೂರು, ಅ. 5: ಕಬ್ಬಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಜೊತೆ ಮಾತುಕತೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದು, ಈ ಕುರಿತು ಕಬ್ಬು ಬೆಳೆಗಾರರು ಯಾವುದೇ ಕಾರಣಕ್ಕೂ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಕಬ್ಬು ಬೆಳೆಗಾರರಿಗೆ ಅಭಯ ನೀಡಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ದರ ಹೆಚ್ಚಳ ವಿಚಾರವಾಗಿ, ಈ ಬಗ್ಗೆ ಕೇಂದ್ರದ ಸಚಿವರ ಜತೆ ಈಗಾಗಲೇ ಎರಡು ಬಾರಿ ಭೇಟಿಯಾಗಿ ಮಾತಾಡಿದ್ದೇನೆ. ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು. ರೈತರ ಹಿತ ಕಾಪಾಡಲು ಸರಕಾರ ಬದ್ಧ ಎಂದು ಹೇಳಿದರು.
ಎಫ್‍ಆರ್‍ಪಿಯಂತೆಯೇ ಬೆಲೆ ನಿಗದಿಪಡಿಸಲು ಸರಕಾರ ಬದ್ಧವಾಗಿದ್ದು, ಕಬ್ಬು ಬೆಳೆಗಾರರು ಅನಗತ್ಯವಾಗಿ ಆತಂಕಕ್ಕೆ ಒಳಗಾಗಬಾರದು. ನಾವು ರೈತರ ಪ್ರತಿಭಟನೆಯನ್ನ ನಾವು ಹತ್ತಿಕ್ಕುವುದಿಲ್ಲ. ಅವರು ಬೇಡಿಕೆ ತಪ್ಪಲ್ಲ. ಎಫ್‍ಆರ್‍ಪಿ ಹೆಚ್ಚಳ ಸಂಬಂಧ ಕೇಂದ್ರದೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಅವರು ವಿವರ ನೀಡಿದರು.
ಬಾಕಿ ಕೊಡಿಸಲು ಕ್ರಮ: ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಒಟ್ಟು 47.17 ಕೋಟಿ ರೂ.ಬಾಕಿ ಇತ್ತು. ಆ ಮೊತ್ತವನ್ನು ಇನ್ನೂ ಎರಡು-ಮೂರು ದಿನಗಳ ಒಳಗೆ 26.26 ಕೋಟಿ ರೂ.ಹಣ ಸರಕಾರಕ್ಕೆ ತುಂಬಿದ್ದಾರೆ. ಇನ್ನು 15.91 ಕೋಟಿ ರೂ.ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಕೆಲ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ ಎಂದರು.