ಪತ್ರಕರ್ತ ಸಿದ್ದಿಕ್ ಕಪ್ಪನ್ ಬಿಡುಗಡೆಗೆ ಆಗ್ರಹಿಸಿ ದಿಲ್ಲಿಯಲ್ಲಿ ಪತ್ರಕರ್ತರ ಒಕ್ಕೂಟಗಳಿಂದ ಪ್ರತಿಭಟನೆ

photo: twitter
ಹೊಸದಿಲ್ಲಿ,ಅ.5: ವಿವಿಧ ಪತ್ರಕರ್ತರ ಒಕ್ಕೂಟಗಳು ಮಂಗಳವಾರ ದಿಲ್ಲಿಯಲ್ಲಿನ ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ)ಯ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿ,ಉ.ಪ್ರದೇಶ ಪೊಲೀಸರಿಂದ ಭಯೋತ್ಪಾದನೆ ಆರೋಪಗಳನ್ನು ಹೊರಿಸಲ್ಪಟ್ಟಿರುವ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರ ಬಿಡುಗಡೆಗೆ ಆಗ್ರಹಿಸಿದರು.
‘ಕಪ್ಪನ್ ಬಂಧನದಲ್ಲಿ ಒಂದು ವರ್ಷವನ್ನು ಕಳೆದಿದ್ದು,ಈ ಸಂದರ್ಭದಲ್ಲಿ ನಾವು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಕಪ್ಪನ್ ಸ್ಥಳಕ್ಕೆ ತೆರಳುವ ಮೊದಲೇ ಅವರನ್ನು ಬಂಧಿಸಲಾಗಿತ್ತು ಮತ್ತು ಈವರೆಗೂ ಜೈಲಿನಲ್ಲಿದ್ದಾರೆ. ನಾವು ಸ್ವತಂತ್ರ ಮಾಧ್ಯಮಕ್ಕಾಗಿ ಹೋರಾಡುತ್ತಿದ್ದೇವೆ. ಪತ್ರಕರ್ತರು ವರದಿಗಾರಿಕೆಗೆ ತೆರಳುತ್ತಿರುವಾಗ ಮಾಧ್ಯಮಗಳ ಮೇಲೆ ನಿರ್ಬಂಧವಿರಕೂಡದು’ ಎಂದು ಪಿಸಿಐ ಅಧ್ಯಕ್ಷ ಉಮಾಕಾಂತ ಲಖೇರಾ ಹೇಳಿದರು.
‘ಸ್ಥಳದಲ್ಲಿ ವರದಿಗಾರಿಕೆ ಮತ್ತು ತನಿಖಾ ವರದಿಗಾರಿಕೆ ದಿನೇ ದಿನೇ ಸಾಯುತ್ತಿವೆ. ಕಪ್ಪನ್ ಅವರನ್ನು ಬಿಡುಗಡೆಗೊಳಿಸುವಂತೆ ಮತ್ತು ಅವರ ವಿರುದ್ಧದ ಆರೋಪಗಳನ್ನು ರದ್ದುಗೊಳಿಸುವಂತೆ ನಾವು ದೇಶದ ಅತ್ಯುನ್ನತ ನ್ಯಾಯಾಂಗವನ್ನು ಕೋರಿಕೊಳ್ಳುತ್ತಿದ್ದೇವೆ ’ ಎಂದರು.
ಕೇರಳ ಕಾರ್ಯನಿರತ ಪತ್ರಕರ್ತರ ಸಂಘ, ದಿಲ್ಲಿ ಪತ್ರಕರ್ತರ ಸಂಘ ಮತ್ತು ಪಿಸಿಎ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಉ.ಪ್ರದೇಶದ ಹಥರಾಸ್ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರದ ಬಳಿಕ ಸಾವನ್ನಪ್ಪಿದ್ದ ದಲಿತ ಬಾಲಕಿಯ ಕುಟುಂಬವನ್ನು ಭೇಟಿಯಾಗಲು ಕಳೆದ ವರ್ಷದ ಅ.5ರಂದು ಅಲ್ಲಿಗೆ ತೆರಳುತ್ತಿದ್ದ ಕಪ್ಪನ್ ಮತ್ತು ಇತರ ಮೂವರನ್ನು ಮಥುರಾ ಪೊಲೀಸರು ಬಂಧಿಸಿದ್ದರು.
ಶಾಂತಿಭಂಗಕ್ಕೆ ಕಾರಣವಾಗುತ್ತಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತಾದರೂ ಬಳಿಕ ದೇಶದ್ರೋಹ ಮತ್ತು ವಿವಿಧ ಭಯೋತ್ಪಾದನೆ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿದೆ.







