‘ಅಪ್ಪಾ,ದಯವಿಟ್ಟು ಬೇಗ ಬನ್ನಿ’: ಆಸ್ಪತ್ರೆಯಲ್ಲಿ ಸಾಯುವ ಸ್ಥಿತಿಯಲ್ಲಿದ್ದ ಉ.ಪ್ರದೇಶದ ಯುವರೈತನ ಮೊರೆ

ಲಖಿಂಪುರ ಖೇರಿ,ಅ.5: ರವಿವಾರ ಉ.ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ತಿಕುನಿಯಾದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಬಲಿಯಾದ ಲವಪ್ರೀತ್ ಸಿಂಗ್ (19) ತನ್ನ ಕೊನೆಯ ಕ್ಷಣಗಳಲ್ಲಿ ಆಸ್ಪತ್ರೆಯಿಂದ ತನ್ನ ತಂದೆಗೆ ಕರೆ ಮಾಡಿ,ತಕ್ಷಣ ಬರುವಂತೆ ಅವರನ್ನು ಬೇಡಿಕೊಂಡಿದ್ದ.
‘ಅವರು ಆತನನ್ನು ಆಸ್ಪತ್ರೆಗೆ ಒಯ್ದಿದ್ದಾಗ ಆತ ನನಗೆ ಕರೆ ಮಾಡಿದ್ದ. ಮಗು,ಹೇಗಿದ್ದಿಯಾ ಎಂದು ನಾನು ಪ್ರಶ್ನಿಸಿದಾಗ,ತಾನು ಚೆನ್ನಾಗಿದ್ದೇನೆ,ಬೇಗ ಬರುತ್ತೇನೆ ಎಂದು ತಿಳಿಸಿದ್ದ. ನಾವು ಮಾರ್ಗಮಧ್ಯದಲ್ಲಿದ್ದೇವೆ ಎಂದು ನಾನು ಆತನಿಗೆ ಹೇಳಿದ್ದೆ. ಆದರೆ ನಾವು ಲಖಿಂಪುರ ಖೇರಿಯನ್ನು ತಲುಪಿದಾಗ ಆತ ಕೊನೆಯುಸಿರೆಳೆದಿದ್ದ’ ಎಂದು ಲವಪ್ರೀತ್ ತಂದೆ ಸತ್ನಾಮ್ ಸಿಂಗ್ ಬಿಕ್ಕುತ್ತಲೇ ತಿಳಿಸಿದರು.
ಕೇಂದ್ರ ಸಹಾಯಕ ಗೃಹಸಚಿವ ಅಜಯ್ ಕುಮಾರ ಮಿಶ್ರಾರ ಭೇಟಿಯ ವಿರುದ್ಧ ಪ್ರತಿಭಟನೆ ಸಂದರ್ಭ ಸಂಭವಿಸಿದ್ದ ಹಿಂಸಾಚಾರದಲ್ಲಿ ಮೃತಪಟ್ಟ ಎಂಟು ಜನರ ಪೈಕಿ ಲವಪ್ರೀತ್ ಮತ್ತು ಇತರ ಮೂವರು ರೈತರು ಸೇರಿದ್ದಾರೆ. ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ಪ್ರತಿಭಟನಾನಿರತರ ಗುಂಪಿನ ಮೇಲೆ ಕಾರನ್ನು ನುಗ್ಗಿಸಿದ್ದ ಎಂದು ರೈತರು ಆರೋಪಿಸಿದ್ದಾರೆ.
ಮಂಗಳವಾರ ತಮ್ಮ ಪುತ್ರನ ಶವಪೆಟ್ಟಿಗೆಯ ಬಳಿ ರೋದಿಸುತ್ತಿದ್ದ ಲವಪ್ರೀತ್ ನ ಕುಟುಂಬ ಸದಸ್ಯರು ಮರಣೋತ್ತರ ಪರೀಕ್ಷೆ ವರದಿ ಮತ್ತು ಆಶಿಷ್ ಮಿಶ್ರಾ ವಿರುದ್ಧ ಎಫ್ಐಆರ್ನ ಪ್ರತಿಯನ್ನು ತಮಗೆ ನೀಡುವವರೆಗೆ ಶವಸಂಸ್ಕಾರವನ್ನು ನಡೆಸಲು ನಿರಾಕರಿಸಿದರು.
ಭಾರೀ ಸಂಖ್ಯೆಯಲ್ಲಿ ಬಂಧುಗಳು ಮತ್ತು ನೆರೆಕರೆಯವರು ಶವದ ಬಳಿ ಕಾಯುತ್ತ ಕುಳಿತಿದ್ದರು.
‘ನನ್ನ ಮಗನನ್ನು ನಿರ್ದಯವಾಗಿ ಕಾರು ಹರಿಸಿ ಕೊಲ್ಲಲಾಗಿದೆ. ಅವರು ಅದಕ್ಕೆ ಹೊಣೆಗಾರ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಆಡಳಿತ ಗಟ್ಟಿಧ್ವನಿಯಲ್ಲಿ ಉತ್ತರಿಸುತ್ತಿಲ್ಲ ಎಂದು ಸತ್ನಾಮ್ ಹೇಳಿದರು.
ಲವಪ್ರೀತ್ನ ಶವ ರವಿವಾರದಿಂದ ಗಾಜಿನ ಪೆಟ್ಟಿಗೆಯಲ್ಲಿದ್ದು,ಆತನ ಇಬ್ಬರು ಸೋದರಿಯರು ತಮ್ಮನ ಸಾವಿಗಾಗಿ ನಿರಂತರವಾಗಿ ಶೋಕಿಸುತ್ತಿದ್ದರು.
‘ತಾನು ರೈತರ ಪ್ರತಿಭಟನೆಗೆ ತೆರಳುತ್ತಿರುವುದಾಗಿ ಮಗ ನನಗೆ ತಿಳಿಸಿದ್ದ. ಸಚಿವರಿಗೆ ಕಪ್ಪು ಬಾವುಟಗಳನ್ನು ತೋರಿಸಲಿದ್ದೇವೆ ಎಂದೂ ಹೇಳಿದ್ದ. ಅವರನ್ನು ಹಿಂದಿನಿಂದ ಕಾರನ್ನು ನುಗ್ಗಿಸಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಬಹುಶಃ ಮಿಶ್ರಾರ ಪುತ್ರ ಕಾರನ್ನು ಚಲಾಯಿಸುತ್ತಿದ್ದ ’ಎಂದು ಸಿಂಗ್ ಹೇಳಿದರು.
ರೈತರು ಮತ್ತು ಪೊಲೀಸರ ನಡುವೆ ಗಂಟೆಗಟ್ಟಲೆ ಮಾತುಕತೆಗಳ ಬಳಿಕ ಕೊನೆಗೂ ಮಂಗಳವಾರ ಅಪರಾಹ್ನ ಮೂರು ಗಂಟೆಗೆ ಲವಪ್ರೀತ್ ಅಂತ್ಯಸಂಸ್ಕಾರ ನಡೆದಿದೆ. ಶವವನ್ನು ಗಾಜಿನ ಪೆಟ್ಟಿಗೆಯಿಂದ ಹೊರತೆಗೆದು ಸುಮಾರು 100 ಮೀ.ದೂರದ ಹೊಲದಲ್ಲಿ ಸಿದ್ಧಗೊಳಿಸಿದ್ದ ಚಿತೆಯ ಬಳಿ ಸಾಗಿಸಲಾಗಿತ್ತು.
ತಮ್ಮ ಮನೆಯಿಂದ ಸಮೀಪವೇ ಇದ್ದ ಚಿತೆಗೆ ಸಾಗುವಷ್ಟರಲ್ಲಿ ದುಃಖತಪ್ತರಾಗಿದ್ದ ಲವಪ್ರೀತ್ ತಾಯಿ ಹಲವಾರು ಸಲ ಕುಸಿದು ಬಿದ್ದಿದ್ದರು.
ರೈತರೊಂದಿಗೆ ಮಾತುಕತೆಗಳ ಬಳಿಕ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿರುವ ರೈತನ ಶವವನ್ನು ಎರಡನೇ ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಪೊಲೀಸರು ಒಪ್ಪಿಕೊಂಡಿದ್ದಾರೆ.