ಫೇಸ್ಬುಕ್ ಸರ್ವರ್ ಸಮಸ್ಯೆಯಿಂದ ಸಿಗ್ನಲ್, ಟೆಲಿಗ್ರಾಂ ಸಾಮಾಜಿಕ ಮಾಧ್ಯಮಗಳಿಗೆ ಲಾಭ: ವರದಿ

ಕ್ಯಾಲಿಫೋರ್ನಿಯಾ, ಅ.5: ಸೋಮವಾರ ಸಾಮಾಜಿಕ ಮಾಧ್ಯಮ ವೇದಿಕೆ ಫೇಸ್ಬುಕ್ ಸರ್ವರ್ನಲ್ಲಿ ಕಾಣಿಸಿಕೊಂಡ ಸಮಸ್ಯೆಯ ಬಳಿಕ 2 ಖಾಸಗಿ ಸಂದೇಶವಾಹಕ ಆ್ಯಪ್ಗಳಾದ ಸಿಗ್ನಲ್ ಮತ್ತು ಟೆಲಿಗ್ರಾಂಗಳಿಗೆ ಮಿಲಿಯಾಂತರ ಹೊಸ ಬಳಕೆದಾರರು ಸೇರ್ಪಡೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸೋಮವಾರ ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡ 6 ಗಂಟೆಗಳಾವಧಿಯ ತಾಂತ್ರಿಕ ದೋಷವು ಜಾಗತಿಕವಾಗಿ 2.7 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್ಯಾಪ್, ಇನ್ಸ್ಟಾಗ್ರಾಂ ಆ್ಯಪ್ಗಳ ಕಾರ್ಯನಿರ್ವಹಣೆಗೂ ತೊಡಕಾಗಿತ್ತು. ಈ ತೊಂದರೆಗೆ ಫೇಸ್‌ಬುಕ್ ಸಿಇಒ ಮಾರ್ಕ್ ಝಕ್ಬರ್ಗ್ ಜನರಲ್ಲಿ ಕ್ಷಮೆ ಯಾಚಿಸಿದ್ದರು.
ಆದರೆ ಫೇಸ್ಬುಕ್ ಗೆ ಆದ ನಷ್ಟ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಲಾಭವಾಗಿ ಪರಿಣಮಿಸಿದೆ. ‘ಸಿಗ್ನಲ್’ ಆ್ಯಪ್ ವಾಟ್ಸ್ಯಾಪ್ಗೆ ಸೂಕ್ತ ಪರ್ಯಾಯ ವ್ಯವಸ್ಥೆಯಾಗಿದೆ ಎಂದು ಟ್ವಿಟರ್ ಸಿಇಒ ಜ್ಯಾಕ್ ಡೋರ್ಸೆ ತನ್ನ ಅನುಚರರಿಗೆ ಸಂದೇಶ ರವಾನಿಸಿದ್ದಾರೆ.
ಸಿಗ್ನಲ್ ಆ್ಯಪ್ ಖಾಸಗಿತನಕ್ಕೆ ನೀಡುವ ಆದ್ಯತೆಯಿಂದ ಇದು ಜನರಿಗೆ ಅಚ್ಚುಮೆಚ್ಚಿನ ವ್ಯವಸ್ಥೆಯಾಗಲಿದೆ. ಬಳಕೆದಾರರ ಯಾವುದೇ ಮಾಹಿತಿಯನ್ನು ಸಂಗ್ರಹಿಸದಿರುವ ಕಾರ್ಯನೀತಿಯಿಂದಾಗಿ, ರಹಸ್ಯ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಕಡಿಮೆ. ಇದೇ ರೀತಿ ಟೆಲಿಗ್ರಾಂ ಆ್ಯಪ್ ಕೂಡಾ ಮಿಲಿಯದಷ್ಟು ಹೊಸ ಗ್ರಾಹಕರನ್ನು ಸೆಳೆದುಕೊಳ್ಳಲು ಯಶಸ್ವಿಯಾಗಿದೆ.







