ಕೊರೋನ ಸೋಂಕು: ಜಾಗತಿಕ ವಿಮಾನಯಾನ ಉದ್ಯಮಕ್ಕೆ 201 ಬಿಲಿಯನ್ ಡಾಲರ್ ನಷ್ಟ

ವಾಷಿಂಗ್ಟನ್, ಅ.5: ಕೊರೋನ ವೈರಸ್ ಸೋಂಕುರೋಗದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಪ್ರಯಾಣಕ್ಕೆ ನಿಬರ್ಂಧ ವಿಧಿಸಿದ್ದ ಕಾರಣ ಜಾಗತಿಕ ವಿಮಾನಯಾನ ಉದ್ಯಮಕ್ಕೆ ಸುಮಾರು 201 ಬಿಲಿಯನ್ ಡಾಲರ್ ನಷ್ಟವಾಗಿದ್ದು ಇದರಿಂದ ಉದ್ಯಮದ 9 ವರ್ಷದ ಆದಾಯದ ಮೇಲೆ ಪ್ರಭಾವ ಉಂಟಾಗಿದೆ ಎಂದು ‘ದಿ ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್’(ಐಎಟಿಎ) ಸೋಮವಾರ ಹೇಳಿದೆ.
ದೇಶೀಯ ಮತ್ತು ಪ್ರಾದೇಶಿಕ ವಿಮಾನಯಾನ ಆರಂಭವಾಗಿದ್ದರೂ, ಅಂತರಾಷ್ಟ್ರೀಯ ವಿಮಾನಯಾನ ಪೂರ್ಣಪ್ರಮಾಣದಲ್ಲಿ ಆರಂಭವಾಗದಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷವೂ ಸುಮಾರು 11.6 ಬಿಲಿಯ ಡಾಲರ್ ನಷ್ಟವಾಗಬಹುದು ಎಂದು ಬೋಸ್ಟನ್ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಂದಾಜಿಸಲಾಗಿದೆ.
ಟ್ರಾನ್ಸ್-ಅಟ್ಲಾಂಟಿಕ್(ಅಟ್ಲಾಂಟಿಕ್ ಸಾಗರದ ಮೇಲಿಂದ ಯುರೋಪ್, ಆಫ್ರಿಕಾ, ದಕ್ಷಿಣ ಏಶ್ಯಾ ಅಥವಾ ಮಧ್ಯಪ್ರಾಚ್ಯದಿಂದ ಉತ್ತರ ಮತ್ತು ಮಧ್ಯ ಅಮೆರಿಕಕ್ಕೆ ವಿಮಾನ ಹಾರಾಟ) ಪ್ರಯಾಣಿಕರಿಗೆ ನವೆಂಬರ್ ನಿಂದ ಅನುಮತಿ ನೀಡಲು ಅಮೆರಿಕ ನಿರ್ಧರಿಸಿದೆ. ಆದರೆ ಇತರ ದೀರ್ಘ ವ್ಯಾಪ್ತಿಯ ವಿಮಾನ ಸಂಚಾರಕ್ಕೆ ಅನುಮತಿ ಇನ್ನೂ ಅನಿಶ್ಚಿತತೆಯಲ್ಲಿದೆ.
ಕೊರೋನ ಬಿಕ್ಕಟ್ಟಿನಿಂದ ವಿಮಾನಯಾನ ಉದ್ಯಮದ ಮೇಲಾಗಿರುವ ಪರಿಣಾಮ ಅಪಾರವಾಗಿದೆ. ಜನತೆಗೆ ಪ್ರವಾಸ ತೆರಳುವ ಇಚ್ಛೆಯಿದ್ದರೂ ಅಂತರಾಷ್ಟ್ರೀಯ ನಿರ್ಬಂಧಗಳು ಅವರಿಗೆ ತೊಡಕಾಗಿವೆ ಎಂದು ಐಎಟಿಎ ಪ್ರಧಾನ ನಿರ್ದೇಶಕ ವಿಲೀ ವಾಲ್ಶ್ ಹೇಳಿದ್ದಾರೆ.