ವರ್ಣ ನಿಂದನೆ: ಮಾಜಿ ಉದ್ಯೋಗಿಗೆ 137 ಮಿಲಿಯನ್ ಡಾಲರ್ ಪಾವತಿಸಲು ಟೆಸ್ಲಾ ಸಂಸ್ಥೆಗೆ ಸೂಚನೆ
ನ್ಯೂಯಾರ್ಕ್, ಅ.5: ಉದ್ಯೋಗದ ಸ್ಥಳದಲ್ಲಿ ವರ್ಣಭೇದ ನಿಂದನೆಗೆ ಒಳಗಾಗಿದ್ದರೂ ಈ ಬಗ್ಗೆ ಸಂಸ್ಥೆ ಗಮನ ಹರಿಸಿಲ್ಲ ಎಂದು ಟೆಸ್ಲಾ ಸಂಸ್ಥೆಯ ಮಾಜಿ ಉದ್ಯೋಗಿ ಹೂಡಿದ್ದ ದಾವೆಯಲ್ಲಿ ಟೆಸ್ಲಾ ಸಂಸ್ಥೆಗೆ ಹಿನ್ನಡೆಯಾಗಿದ್ದು , ಉದ್ಯೋಗಿಗೆ ಪರಿಹಾರ ರೂಪದಲ್ಲಿ 137 ಮಿಲಿಯನ್ ಡಾಲರ್ ಪಾವತಿಸುವಂತೆ ನ್ಯಾಾಲಯ ಸೂಚಿಸಿರುವುದಾಗಿ ವರದಿಯಾಗಿದೆ.
ಉತ್ತರ ಕ್ಯಾಲಿಫೋರ್ನಿಯಾದಲ್ಲಿರುವ ಇಲೆಕ್ಟ್ರಿಕ್ ಕಾರು ಉತ್ಪಾದನಾ ಸಂಸ್ಥೆ ಟೆಸ್ಲಾದಲ್ಲಿ ಲಿಫ್ಟ್ ಆಪರೇಟರ್ ಆಗಿದ್ದ ಕಪ್ಪು ವರ್ಣೀಯ ವ್ಯಕ್ತಿ ಒವೆನ್ ಡಯಾಝ್ ಕೆಲಸದ ಸ್ಥಳದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದಾನೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ನ್ಯಾಯಾಲಯ ಹೇಳಿದೆ. ಸಾಮಾನ್ಯವಾಗಿ ಉದ್ಯೋಗಿಗಳಿಗೆ ಸಂಬಂಧಿಸಿದ ವಿವಾದ, ಸಮಸ್ಯೆಗಳನ್ನು ಆಂತರಿಕ ಮಾತುಕತೆಯ ಮೂಲಕ ಪರಿಹರಿಸುವ ಟೆಸ್ಲಾ ಸಂಸ್ಥೆ ಲೈಂಗಿಕ ದೌರ್ಜನ್ಯ ಮತ್ತು ವರ್ಣಬೇಧ ನಿಂದನೆಯಂತಹ ಪ್ರಕರಣಗಳನ್ನು ಇನ್ನಷ್ಟು ಪಾರದರ್ಶಕವಾಗಿ ನಿರ್ವಹಿಸುವ ಅಗತ್ಯವಿದೆ ಎಂದು ಅಕ್ಟೋಬರ್ 7ರಂದು ನಡೆಯುವ ಶೇರುದಾರರ ಸಭೆಯಲ್ಲಿ ಆಗ್ರಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.





