ಸಮುದ್ರವ್ಯಾಪ್ತಿಯ ಉಲ್ಲಂಘನೆ: ಚೀನಾ ರಾಯಭಾರಿಗೆ ಖಂಡನೆ ಸಲ್ಲಿಸಿದ ಮಲೇಶ್ಯಾ
ಕೌಲಲಾಂಪುರ, ಅ.5: ದಕ್ಷಿಣ ಚೀನಾ ಸಮುದ್ರದ ಬೋರ್ನಿಯೋ ದ್ವೀಪದ ಬಳಿಯಿರುವ, ಮಲೇಶ್ಯಾದ ವಿಶೇಷ ಆರ್ಥಿಕ ವಲಯಕ್ಕೆ ಸೇರಿದ ಪ್ರದೇಶದಲ್ಲಿ ಚೀನಾದ ನೌಕೆಗಳ ಉಪಸ್ಥಿತಿ ಮತ್ತು ಚಟುವಟಿಕೆಗಳ ಬಗ್ಗೆ ಮಲೇಶ್ಯಾಕ್ಕೆ ಚೀನಾದ ರಾಯಭಾರಿಯನ್ನು ಕರೆಸಿಕೊಂಡು ಖಂಡನೆ ಸಲ್ಲಿಸಲಾಗಿದೆ ಎಂದು ಮಲೇಶ್ಯಾದ ವಿದೇಶ ವ್ಯವಹಾರ ಇಲಾಖೆ ಸೋಮವಾರ ಹೇಳಿಕೆ ನೀಡಿದೆ.
ಗಸ್ತು ದೋಣಿಯ ಸಹಿತ ಚೀನಾದ ನೌಕೆ ಮಲೇಶ್ಯಾದ ಸಬಾ ಮತ್ತು ಸರಾವಕ್ನ ತೀರದ ಸನಿಹಕ್ಕೆ ಬಂದಿದ್ದು ಇದು 1982ರ ವಿಶ್ವಸಂಸ್ಥೆಯ ‘ಸಮುದ್ರದ ನಿಯಮ’ ನಿರ್ಣಯದ ಸಾರಾಸಗಟು ಉಲ್ಲಂಘನೆಯಾಗಿದೆ. ನಮ್ಮ ಸಮುದ್ರ ವ್ಯಾಪ್ತಿಯಲ್ಲಿನ ಸಾರ್ವಭೌಮತೆ ಮತ್ತು ಸಾರ್ವಭೌಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಮಲೇಶ್ಯಾದ ನಿಲುವು ಮತ್ತು ಕ್ರಮಗಳು ಅಂತರಾಷ್ಟ್ರೀಯ ನಿಯಮಕ್ಕೆ ಅನುಸಾರವಾಗಿದೆ ಎಂದು ಹೇಳಿಕೆ ತಿಳಿಸಿದೆ.
ಮಲೇಶ್ಯಾ, ಫಿಲಿಪ್ಪೀನ್ಸ್, ವಿಯೆಟ್ನಾಂ ಮತ್ತು ಬ್ರೂನೈ ದೇಶಗಳು ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಹಕ್ಕು ಸಾಧಿಸುತ್ತಿವೆ. ಆದರೆ ಸಂಪೂರ್ಣ ದಕ್ಷಿಣ ಚೀನಾ ಸಮುದ್ರಪ್ರದೇಶ ತನ್ನ ವ್ಯಾಪ್ತಿಗೆ ಸೇರಿದೆ ಎಂದು ಚೀನಾ ಪ್ರತಿಪಾದಿಸುತ್ತಿದೆ.
ಕಳೆದ ವರ್ಷ ಸರಾವಾಕ್ ಬಳಿಯ ಸಮುದ್ರದಲ್ಲಿ ಮಲೇಶ್ಯಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಹೊರತೆಗೆಯುವ ಕಾರ್ಯಾಚರಣೆ ಆರಂಭಿಸಿದಾಗ ಅದಕ್ಕೆ ಆಕ್ಷೇಪ ಎತ್ತಿದ್ದ ಚೀನಾ, ಆ ಪ್ರದೇಶಕ್ಕೆ ಗಸ್ತು ನೌಕೆಯನ್ನು ರವಾನಿಸಿತ್ತು. ಸುಮಾರು 1 ತಿಂಗಳು ಇಲ್ಲಿ ಬಿಕ್ಕಟ್ಟು ಮುಂದುವರಿದಿತ್ತು.







