ಲಕ್ನೋಗೆ ಭೇಟಿ ನೀಡಿದ್ದ ಪ್ರಧಾನಿ ಲಖಿಂಪುರಕ್ಕೆ ತೆರಳಲಿಲ್ಲ, ಇದು 'ರೈತರ ಮೇಲಿನ ವ್ಯವಸ್ಥಿತ ದಾಳಿ': ರಾಹುಲ್ ಗಾಂಧಿ
"ಇಂದು ಭಾರತದಲ್ಲಿ ಸರ್ವಾಧಿಕಾರವಿದೆ"

ಹೊಸದಿಲ್ಲಿ: ಹಿಂಸಾಚಾರ ಪೀಡಿತ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಮೃತಪಟ್ಟ ರೈತರ ಕುಟುಂಬಗಳನ್ನು ಭೇಟಿ ಮಾಡಲು ರಾಹುಲ್ ಗಾಂಧಿಗೆ ಅನುಮತಿ ನಿರಾಕರಿಸಲಾಗಿದೆ. ಆದಾಗ್ಯೂ ನಾನು ಇಂದು ಇತರ ಇಬ್ಬರೊಂದಿಗೆ ಲಕ್ನೋಗೆ ಭೇಟಿ ನೀಡಲಿದ್ದೇನೆ ಎಂದು ದೃಢಪಡಿಸಿದರು.
"ನಿನ್ನೆ ಪ್ರಧಾನಿ ಲಕ್ನೋಗೆ ಭೇಟಿ ನೀಡಿದ್ದರು. ಆದರೆ ಅವರು ಲಖಿಂಪುರ್ ಖೇರಿಗೆ ಭೇಟಿ ನೀಡಲಿಲ್ಲ. ಇದು ರೈತರ ಮೇಲಿನ ವ್ಯವಸ್ಥಿತ ದಾಳಿ" ಎಂದು ರಾಹುಲ್ ಗಾಂಧಿ ತಮ್ಮ ಭೇಟಿಗೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಆಝಾದಿ @ 75 ಸಮ್ಮೇಳನವನ್ನು ಉದ್ಘಾಟಿಸಲು ಮಂಗಳವಾರ ಪ್ರಧಾನಿ ಮೋದಿ ಲಕ್ನೋಗೆ ತೆರಳಿದ್ದರು.
ಕೇಂದ್ರ ಸಚಿವರ ಪುತ್ರನಿಂದ ಚಲಾಯಿಸಲ್ಪಟ್ಟ ಎಸ್‌ಯುವಿ ರವಿವಾರ ಲಖಿಂಪುರ್ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಹರಿದಿತು. ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ.
"ಇಂದು ಭಾರತದಲ್ಲಿ ಸರ್ವಾಧಿಕಾರವಿದೆ. ರಾಜಕಾರಣಿಗಳು ಉತ್ತರ ಪ್ರದೇಶಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ನಿನ್ನೆಯಿಂದ ನಮಗೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಛತ್ತೀಸ್‌ಗಢ ಮುಖ್ಯಮಂತ್ರಿಯನ್ನು ಹೋಗಲು ಬಿಡಲಿಲ್ಲ. ಏಕೆ? ಏಕೆಂದರೆ ದೊಡ್ಡ ಲೂಟಿ ನಡೆಯುತ್ತಿದೆ "ಎಂದು ಕಾಂಗ್ರೆಸ್ ನಾಯಕ ಆರೋಪಿಸಿದರು.