‘ಫ್ರುಟ್ಸ್’ ತಂತ್ರಾಂಶಕ್ಕಾಗಿ ಮಾಹಿತಿ ನೀಡುವಂತೆ ರೈತರಿಗೆ ಡಿಸಿ ಮನವಿ
ಉಡುಪಿ, ಆ.6: ಸರಕಾರದ ನಿರ್ದೇಶನದಂತೆ ಸರಕಾರದ ವಿವಿಧ ಯೋಜನೆ ಗಳಾದ ಕೃಷಿ ಇಲಾಖೆಯ ಪಿಎಂ ಕಿಸಾನ್, ಕೆ.-ಕಿಶಾನ್ ಯೋಜನೆ, ತೋಟಗಾರಿಕಾ ಇಲಾಖೆಯ ಹಸಿರು ಯೋಜನೆ, ಹೈನುಗಾರಿಕೆ ಹಾಗೂ ಪಶು ಸಂಗೋಪನೆ ಇಲಾಖೆಯ ಯೋಜನೆ, ಆಹಾರ ಮತ್ತು ನಾಗರಿಕ ಸರಬರಾಜು, ರೇಷ್ಮೆ ಇಲಾಖೆಯಡಿ ಬರುವ ಯೋಜನೆಗಳು ಹಾಗೂ ಬ್ಯಾಂಕ್‌ಗಳು ನೀಡುವ ಕೃಷಿ ಸಾಲ ಇತ್ಯಾದಿಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ಸಹಕಾರಿಯಾಗುವಂತೆ ರೈತರ ಜಮೀನಿನ ನಿಖರ ಹಾಗೂ ಸಂಪೂರ್ಣ ಮಾಹಿತಿಗಳನ್ನು ಸಂಗ್ರಹಿಸುವ ಸಲುವಾಗಿ ಫ್ರುಟ್ಸ್ (ಫಾರ್ಮರ್ ರಿಜಿಸ್ಟ್ರೇಶನ್ ಯುನಿಫೈಡ್ ಬೆನಿಫಿಷರಿ ಇನ್‌ಫಾರ್ಮೇಶನ್ ಸಿಸ್ಟಮ್) ತಂತ್ರಾಂಶ ಬಳಸಲಾಗುತ್ತಿದೆ.
ಫ್ರುಟ್ಸ್ ತಂತ್ರಾಂಶದಲ್ಲಿ ಮಾಹಿತಿಯನ್ನು ಸಂಗ್ರಹಿಸುವ ಕುರಿತಂತೆ ಸರಕಾರ ಈಗಾಗಲೇ ಸಂಬಂಧಿತರಿಗೆ ನಿರ್ದೇಶನವನ್ನು ನೀಡಿದೆ. ಆದ್ದರಿಂದ ರೈತರು ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ‘ಫ್ರುಟ್ಸ್’ ತಂತ್ರಾಂಶದಲ್ಲಿ ರೈತರ ಆಧಾರ್ ನಂಬರ್, ಬ್ಯಾಂಕ್ ಖಾತಾ ನಂಬರ್ ಮತ್ತು ರೈತರಿಗೆ ಸಂಬಂಧಪಟ್ಟ ಎಲ್ಲಾ ಜಮೀನುಗಳ ಸರ್ವೆ ನಂಬರುಗಳನ್ನು ದಾಖಲಿಸಬೇಕಾಗಿದೆ.
ಇದಕ್ಕಾಗಿ ಉಡುಪಿ ಜಿಲ್ಲೆಯ ಎಲ್ಲಾ ರೈತರು ತಮ್ಮ ಬ್ಯಾಂಕ್ ಖಾತೆ ನಂಬರ್, ಆಧಾರ್ ಪ್ರತಿ ಮತ್ತು ಎಲ್ಲಾ ಕೃಷಿ ಜಮೀನುಗಳ ಸರ್ವೇ ನಂಬರ್‌ಗಳ ಮಾಹಿತಿ ಯನ್ನು ತಮ್ಮ ವ್ಯಾಪ್ತಿಯ ತಹಶೀಲ್ದಾರರು/ಗ್ರಾಮಲೆಕ್ಕಿಗರ /ರೈತ ಸಂಪರ್ಕ ಕೇಂದ್ರ ಕಛೇರಿಗೆ ಮುಂದಿನ ಮೂರು ದಿನಗಳ ಒಳಗಾಗಿ ತಲುಪಿಸಬೇಕೆಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ಮಾಹಿತಿಗಳು ಸರ್ಕಾರದ ವಿವಿಧ ಇಲಾಖೆಯಡಿ ನೀಡಲಾಗುವ ಯೋಜನೆಗಳಿಗೆ ಹಾಗೂ ಸರಕಾರದಿಂದ ಸಿಗುವ ಸೌಲಭ್ಯಗಳಿಗೆ ಉಪಯುಕ್ತ ವಾಗುವುದರಿಂದ ಮೇಲಿನ ದಾಖಲೆಗಳನ್ನು ತಕ್ಷಣ ನೀಡುವಂತೆ ಕೋರಿದ್ದಾರೆ.







