ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಯುದ್ಧೋಪಾದಿಯಲ್ಲಿ ಪರಿಹಾರ ಒದಗಿಸಿ: ರಮಾನಾಥ ರೈ ಒತ್ತಾಯ

ಬಂಟ್ವಾಳ, ಅ.6: ಪ್ರಾಕೃತಿಕ ವಿಕೋಪದಿಂದ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಾಸದ ಮನೆಗಳು ಹಾಗೂ ಕೃಷಿಗೆ ಅಪಾರ ಹಾನಿಗಳುಂಟಾಗಿದ್ದು ಇದನ್ನು ವಿಶೇಷವಾಗಿ ಪರಿಗಣಿಸಿ ಸಂತ್ರಸ್ತರಿಗೆ ಯುದ್ಧೋಪಾದಿಯಲ್ಲಿ ಶೀಘ್ರ ಪರಿಹಾರ ಒದಗಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಜಿಲ್ಲಾಡಳಿತ ಮತ್ತು ಸರಕಾರವನ್ನು ಒತ್ತಾಯಿಸಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಬೀಸಿದ ಭಾರೀ ಸುಂಟರಗಾಳಿ ಮಳೆಗೆ ಹಲವು ವಾಸದ ಮನೆಗಳು, ಫಸಲು ಬಿಟ್ಟಿದ್ದ ಫಲವತ್ತಾದ ಅಡಿಕೆ ಮರಗಳು ಧರೆಶಾಹಿಯಾಗಿವೆ. ಇದರಿಂದ ಹಲವು ಕೃಷಿಕರಿಗೆ ಭಾರೀ ನಷ್ಟಗಳಾಗಿದ್ದು ಸರಕಾರ ಸಂತ್ರಸ್ತ ರೈತರಿಗೆ ವಿಶೇಷ ಪ್ಯಾಕೇಜ್ ಮೂಲಕ ತುರ್ತಾಗಿ ಪರಿಹಾರ ನೀಡಬೇಕು ಎಂದು ಅಗ್ರಹಿಸಿದರು.
ಹಾನಿಗೊಳಗಾದ ವಾಸದ ಮನೆಗಳ ಸಂತ್ರಸ್ತರಿಗೆ ಪರಿಹಾರ ನೀಡುವುದು ತಡ ಮಾಡಿದರೆ ಸಂತ್ರಸ್ತರು ತೀವ್ರ ಸಂಕಷ್ಟ ಅನುಭವಿಸುತ್ತಾರೆ. ಸಾಲ ಮಾಡಿ ಮನೆ ದುರಸ್ತಿ ಮಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಹಾಗಾಗಿ ಜಿಲ್ಲಾಡಳಿತ ಮತ್ತು ಸರಕಾರ ಕೂಡಲೇ ಘಟನಾ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಸಮಗ್ರವಾಗಿ ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಕೊಳೆರೋಗದಿಂದ ನಷ್ಟಕ್ಕೊಳಗಾದ ಅಡಿಕೆ ಕೃಷಿಕರಿಗೆ ಎರಡು ವರ್ಷಗಳಿಂದ ಪರಿಹಾರ ಸಿಕ್ಕಿಲ್ಲ. ಇದೀಗ ಪ್ರಾಕೃತಿಕ ವಿಕೋಪದಲ್ಲಿ ಹಾನಿಗೊಳಗಾದ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಲು ಇದೇ ರೀತಿ ವಿಳಂಬ ಧೋರಣೆ ಮಾಡದೆ ವಿಶೇಷ ಪರಿಹಾರವನ್ನು ಶೀಘ್ರ ಒದಗಿಸಬೇಕು ಎಂದು ಒತ್ತಾಯಿಸಿದರು.
ನಾನು ಸಚಿವನಾಗಿದ್ದಾಗ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ 24 ತಾಸಿನೊಳಗೆ ಸಂತ್ರಸ್ತರಿಗೆ ಪರಿಹಾರವನ್ನು ತಹಸೀಲ್ದಾರ್ ಮೂಲಕ ಒದಗಿಸುವ ಕೆಲಸ ಮಾಡಿದ್ದೇನೆ. ಕೆಲವು ಸಂತ್ರಸ್ತರಿಗೆ ಸ್ಥಳದಲ್ಲೇ ಪರಿಹಾರ ಧನ ವಿತರಿಸಿದ್ದೇನೆ. ಪರಿಹಾರ ವಿತರಿಸುವುದು ತಡ ಮಾಡಿದಷ್ಟು ಸಂತ್ರಸ್ತರಿಗೆ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳಿದರು.
ನಾನು ಈಗಾಗಲೇ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ್ದು ಹಲವೆಡೆ ವ್ಯಾಪಕ ಹಾನಿ ಸಂಭವಿಸಿವೆ. ಯಾರಿಗೆ ಎಷ್ಟು ಹಾನಿಯಾಗಿದೆ ಎಂಬುದನ್ನು ಇಲಾಖಾಧಿಕಾರಿಗಳು ಸೂಕ್ತ ಸಮೀಕ್ಷೆ ನಡೆಸಿ ನಷ್ಟಕ್ಕೊಳಗಾದವರಿಗೆ ಪರಿಹಾರವನ್ನು ತುರ್ತಾಗಿ ಒದಗಿಸುವಂತೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಸುದರ್ಶನ ಜೈನ್, ಅಬ್ಬಾಸ್ ಆಲಿ, ಚಂದ್ರಶೇಖರ ಪೂಜಾರಿ, ಸುರೇಶ್ ಜೋರ, ಆನಂದ ನರಿಕೊಂಬು, ದೇವಪ್ಪ ಕುಲಾಲ್ ಮತ್ತಿತರರು ಇದ್ದರು.







