ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲುವವರೆಗೆ ನಾನೇ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

ಸತೀಶ ಜಾರಕಿಹೊಳಿ
ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲುವವರೆಗೆ ಕಾಂಗ್ರೆಸ್ನಿಂದ ನಾನೇ ಅಭ್ಯರ್ಥಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಇಂದಿಲ್ಲಿ ಹೇಳಿದ್ದಾರೆ.
ಬುಧವಾರ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಮಕನಮರಡಿ ಕ್ಷೇತ್ರವನ್ನು ಪುತ್ರ ಅಥವಾ ಪುತ್ರಿಗೆ ಬಿಟ್ಟುಕೊಡುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಚುನಾವಣೆಗೆ ಇನ್ನೂ ಎರಡು ವರ್ಷ ಸಮಯವಿದ್ದು, ಈಗಲೇ ಆ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದರು.
''ನಮ್ಮನ್ನು ಸೋಲಿಸುವ ತಂಡ ಇದೀಗ ಪಕ್ಷದಿಂದ ಹೊರ ಹೋಗಿದೆ. ಹೀಗಾಗಿ, ಈಗ ನಾವು ಆತಂಕಪಡುವ ಅಗತ್ಯವಿಲ್ಲ ಎಂದ ಅವರು, ವಿರೋಧಿಗಳು ಇರಬೇಕು. ಆಗ ಮಾತ್ರ ನಾವು ಎಚ್ಚರಿಕೆಯಿಂದ ಇರುತ್ತೇವೆ. ಆದರೆ, ಸಾರ್ವಜನಿಕವಾಗಿ ಹೇಳಿಕೆ ನೀಡುವ ವೇಳೆ ಎಚ್ಚರಿಕೆ ಅಗತ್ಯ. ಮನಸೋ ಇಚ್ಛೆ ಮಾತನಾಡುವುದು ಒಳ್ಳೆಯದಲ್ಲ'' ಎಂದು ಹೆಬ್ಬಾಳ್ಕರ್ ವಿರುದ್ಧ ಹೇಳಿಕೆ ನೀಡಿದ್ದ ಸಂಜಯ್ ಪಾಟೀಲ್ಗೆ ತಿರುಗೇಟು ನೀಡಿದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಇಬ್ಬರು ಟಿಕೆಟ್ ಆಕಾಂಕ್ಷಿಗಳಿದ್ದು, ಚುನಾವಣೆಗೂ ಮೊದಲೇ ತಮ್ಮ ‘ಚಡ್ಡಿ' ಗಟ್ಟಿ ಮಾಡಿಕೊಳ್ಳುವ ದೃಷ್ಟಿಯಿಂದ ಮಾಜಿ ಶಾಸಕ ಸಂಜಯ್ ಪಾಟೀಲ್ ಮನಸೋ ಇಚ್ಛೆ ನಾಲಿಗೆ ಹರಿಯಬಿಟ್ಟಿದ್ದಾರೆ. ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಸ್ಪರ್ಧೆಗೆ ಪೈಪೋಟಿ ನಡೆಸಿದ್ದಾರೆ ಎಂದು ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಚುನಾವಣೆಗೆ ಸ್ಪರ್ಧೆ: ಜಿಲ್ಲೆಯಲ್ಲಿ ಮುಂಬರುವ ವಿಧಾನಪರಿಷತ್ ಚುನಾವಣೆಯ ಒಂದು ಸ್ಥಾನಕ್ಕೆ ಮಾತ್ರ ಕಾಂಗ್ರೆಸ್ ಸ್ಪರ್ಧಿಸಲಿದೆ. ಜಿಲ್ಲೆಯಲ್ಲಿ ಪರಿಷತ್ನ ಎರಡು ಸ್ಥಾನಗಳಿವೆ. ಇಬ್ಬರು ಸ್ಪರ್ಧೆ ಮಾಡಿದರೆ ನಮ್ಮಲ್ಲೇ ಪೈಪೋಟಿ ಏರ್ಪಡುತ್ತದೆ. ಹೀಗಾಗಿ ಗೆಲ್ಲುವುದು ಕಷ್ಟ. ಆದುದರಿಂದ ಒಂದೇ ಸ್ಥಾನಕ್ಕೆ ಸ್ಪರ್ಧಿಸಲಿದ್ದು, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.







