ತೈವಾನ್-ಚೀನಾ ಬಿಕ್ಕಟ್ಟು ಕುರಿತು ಕ್ಸಿ ಜಿಂಪಿಂಗ್ ಜತೆ ಮಾತುಕತೆ: ಬೈಡೆನ್
ವಾಷಿಂಗ್ಟನ್, ಅ.6: ಸ್ವಯಂ ಆಡಳಿತ ವ್ಯವಸ್ಥೆಯಿರುವ ತೈವಾನ್ನ ವಾಯು ರಕ್ಷಣಾ ವಲಯದತ್ತ ಚೀನಾ ದಾಖಲೆ ಸಂಖ್ಯೆಯಲ್ಲಿ ಯುದ್ಧವಿಮಾನ ರವಾನಿಸಿದ ವಿಷಯದ ಬಗ್ಗೆ ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಜತೆ ಮಾತುಕತೆ ನಡೆಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.
ಶ್ವೇತಭವನದಲ್ಲಿ ನಡೆದ ಸುದ್ಧಿ ಗೋಷ್ಠಿಯಲ್ಲಿ ವರದಿಗಾರರು ‘ತೈವಾನ್ ನ ಮೇಲೆ ಚೀನಾದ ಪ್ರಚೋದನೆ’ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ತೈವಾನ್ ವಿಷಯದಲ್ಲಿ ಚೀನಾ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ತೈವಾನ್ ಒಪ್ಪಂದಕ್ಕೆ ಬದ್ಧವಾಗಿರಲು ನಾವು ಒಪ್ಪಿಕೊಂಡಿದ್ದೇವೆ. ಒಪ್ಪಂದಕ್ಕೆ ಬದ್ಧವಾಗಿರುವುದನ್ನು ಹೊರತುಪಡಿಸಿ ಬೇರೇನನ್ನೂ ಅವರು(ಚೀನಾ) ಮಾಡುವುದಿಲ್ಲ ಎಂಬ ವಿಶ್ವಾಸವಿದೆ’ ಎಂದರು.
ತೈಪೆಗೆ ಸೇನೆ ಮತ್ತು ರಾಜಕೀಯ ಬೆಂಬಲ ನೀಡುತ್ತಿರುವ ಅಮೆರಿಕವು ತೈವಾನ್ನೊಂದಿಗೆ ಅಧಿಕೃತ ರಾಜತಾಂತ್ರಿಕ ಸಂಬಂಧ ಹೊಂದಿಲ್ಲವಾದರೂ ತೈವಾನ್ ಅನ್ನು ರಕ್ಷಿಸಲು ಕಾನೂನಿಗೆ ಬದ್ಧವಾಗಿದೆ. ಅಲ್ಲದೆ ಚೀನಾ-ತೈವಾನ್ ಸಂಬಂಧದ ಕುರಿತೂ ಯಾವುದೇ ನಿರ್ದಿಷ್ಟ ಒಪ್ಪಂದ ಮಾಡಿಕೊಂಡಿಲ್ಲ. ಜೋ ಬೈಡೆನ್ ಉಲ್ಲೇಖಿಸಿರುವ ಒಪ್ಪಂದ ಪದದ ಅರ್ಥ ಬಹುಷಃ ‘ಚೀನಾಕ್ಕೆ ರಾಜತಾಂತ್ರಿಕ ಮಾನ್ಯತೆ ನೀಡುವ ಜತೆಗೆ, ತೈವಾನ್ನ ಸ್ವರಕ್ಷಣೆಯ ಹಕ್ಕನ್ನೂ ಬೆಂಬಲಿಸುತ್ತೇವೆ ಎಂದಾಗಿರಬಹುದು’ ಎಂದು ಅಲ್ಜಝೀರಾದ ವರದಿಗಾರ ರಾಬ್ ಮೆಕ್ಬ್ರಿಡ್ ಹೇಳಿದ್ದಾರೆ.
ಕಳೆದ ಶುಕ್ರವಾರದಿಂದ ಸತತ 3 ದಿನ ಚೀನಾದ 56 ಯುದ್ಧವಿಮಾನಗಳು ತನ್ನ ವಾಯುರಕ್ಷಣಾ ವಲಯ ಪ್ರವೇಶಿಸಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ತೈವಾನ್ ಹೇಳಿದೆ. ಆದರೆ ತೈವಾನ್ ತನ್ನದೇ ಪ್ರಾಂತ್ಯ ಎಂದು ಪ್ರತಿಪಾದಿಸುತ್ತಿರುವ ಚೀನಾ ಈ ವರ್ಷ ತೈವಾನ್ ಜಲಸಂಧಿ ದಾಟಿ ನಡೆಸುವ ಚಟುವಟಿಕೆಗಳನ್ನು ಹೆಚ್ಚಿಸಿದೆ. ತೈವಾನ್ ಜಲಸಂಧಿಯಲ್ಲಿನ ಪರಿಸ್ಥಿತಿ ಕಳೆದ 40 ವರ್ಷಗಳಲ್ಲೇ ಅತ್ಯಂತ ಕೆಟ್ಟದಾಗಿದೆ ಮತ್ತು 2025ರೊಳಗೆ ತೈವಾನ್ ಮೇಲೆ ಪೂರ್ಣಪ್ರಮಾಣದ ಅತಿಕ್ರಮಣ ನಡೆಸುವ ಸಾಮರ್ಥ್ಯ ಚೀನಾಕ್ಕೆ ಇದೆ ಎಂದು ಬುಧವಾರ ತೈವಾನ್ ರಕ್ಷಣಾ ಸಚಿವ ಚಿಯು ಕುವುಚೆಂಗ್ ಎಚ್ಚರಿಸಿದ್ದರು.
ತನ್ನ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಜನಜೀವನ ವ್ಯವಸ್ಥೆಯ ಮೇಲೆ ಬೆದರಿಕೆ ಒಡ್ಡಿದರೆ ತನ್ನನ್ನು ರಕ್ಷಿಸಿಕೊಳ್ಳಲು ತೈವಾನ್ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಲಿದೆ ಎಂದು ತೈವಾನ್ ಅಧ್ಯಕ್ಷೆ ತ್ಸಾಯ್ ಲಿಂಗ್ವೆನ್ ದೇಶದ ಪ್ರಮುಖ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾದ ಸರಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್, ಲಿಂಗ್ವೆನ್ ಮತ್ತವರ ಡಿಪಿಪಿ ಪಕ್ಷ ತೈವಾನ್ನ ಪ್ರಜಾಪ್ರಭುತ್ವವನ್ನು ಮುಖ್ಯವಾಹಿನಿ ಸಿದ್ಧಾಂತದಿಂದ ದೂರಗೊಳಿಸುತ್ತಿದ್ದಾರೆ ಎಂದು ಟೀಕಿಸಿದ್ದು, ತೈವಾನ್ ಅನ್ನು ಚೀನಾದಿಂದ ಪ್ರತ್ಯೇಕಗೊಳಿಸಲು ಅವರು ಬಯಸಿದಾಗ ಅವರ ಭವಿಷ್ಯ ದುರಂತತ್ತ ಸಾಗುತ್ತದೆ ಎಂದು ಎಚ್ಚರಿಸಿದೆ.
ಡಿಪಿಪಿ ನಾಯಕರು ವಿದೇಶದ ಶಕ್ತಿಗಳೊಂದಿಗೆ ಕೈಜೋಡಿಸಿ ಮುಂದುವರಿಯುವುದು ಅವರು ತಮ್ಮ ಸಮಾಧಿಯತ್ತ ಸಾಗುತ್ತಿರುವುದರ ಸೂಚನೆಯಾಗಿದೆ. ಪ್ರತ್ಯೇಕತೆಯ ವಿರುದ್ಧದ ಹೋರಾಟ ಮತ್ತು ಮರುಏಕೀಕರಣ ಸಾಧಿಸುವ ಚೀನಾದ ಸಂಕಲ್ಪವು ತೈವಾನ್ ಅನ್ನು ಬೆಂಬಲಿಸುವ ವಿಶ್ವದ ಯಾವುದೇ ಶಕ್ತಿಗಿಂತ ಬಲಿಷ್ಟವಾಗಿದೆ ಎಂದು ಗ್ಲೋಬಲ್ ಟೈಮ್ಸ್ ಎಚ್ಚರಿಸಿದೆ.







