ಆಧಾರ್ ನೋಂದಣಿ ವಂಚನೆ ಘಟನೆ ಬಗ್ಗೆ ನಿಗಾ ಇಡಲು ಕೇಂದ್ರ, ರಾಜ್ಯ ಗಳಿಗೆ ಹೆಕೋರ್ಟ್ ಸೂಚನೆ

ಬೆಂಗಳೂರು, ಅ.6: ಆಧಾರ್ ನೋಂದಣಿ ವಂಚನೆ ಘಟನೆಗಳಿಗೆ ಸಂಬಂಧಿಸಿದಂತೆ ನಿಗಾ ಇಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಹೈಕೋರ್ಟ್ ತಿಳಿಸಿದೆ.
ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳ ಅಡಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಎಜುರೇಸ್ ಕಂಪೆನಿಯ ಸಿಇಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು.
ಅರ್ಜಿದಾರರು ಆಧಾರ್ ನೋಂದಣಿಯ ಉಚಿತ ಕಿಟ್‌ಗಳ ವ್ಯಾಪಾರದಲ್ಲಿ ತೊಡಗಿಕೊಂಡಿರುವುದು ಸ್ಪಷ್ಟವಾಗಿದೆ. ಇದು ನಿಸ್ಸಂದೇಹವಾಗಿ ಐಪಿಸಿ ಸೆಕ್ಷನ್ 420ರ ಅಡಿ ಶಿಕ್ಷಾರ್ಹ ಅಪರಾಧವಾಗಲಿದ್ದು ಹಾಗೆ ನೋಡಿದರೆ ಇದು ಮೋಸ ಮಾಡುವ ಉದ್ದೇಶದಿಂದ ಮಾತ್ರವೇ ಎಸಗಿದ ಕೃತ್ಯ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ಅಧಿಕಾರಿ ಸಾಮಾನ್ಯ ನಾಗರಿಕನಂತೆ ಆಧಾರ್ ಕಾರ್ಡ್ ಪಡೆಯಲು ‘ನಮ್ಮ ಕೇಂದ್ರ’ಕ್ಕೆ ಭೇಟಿ ನೀಡಿದಾಗ ಅರ್ಜಿದಾರರು ಆಧಾರ್ ಕಿಟ್ ಮತ್ತು ಕಾರ್ಡ್‌ಗಳನ್ನು ಮಾರಾಟ ಮಾಡುವ ದಾಖಲಾತಿ ಏಜೆನ್ಸಿಯೊಂದಿಗೆ ದುಷ್ಕೃತ್ಯ ಎಸಗಿರುವುದು ಕಂಡುಬಂದಿದೆ ಎಂದು ನ್ಯಾಯಾಲಯಕ್ಕೆ ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಶಾಂತಿ ಭೂಷಣ್ ತಿಳಿಸಿದರು. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿದ ಪೀಠ ಅರ್ಜಿ ವಜಾಗೊಳಿಸಿತು.







