1ನೆ ತರಗತಿ ಆರಂಭದ ಬಗ್ಗೆ ದಸರಾ ಬಳಿಕ ತೀರ್ಮಾನ: ಬಿ.ಸಿ.ನಾಗೇಶ್

ಕುಂದಾಪುರ, ಅ.6: ರಾಜ್ಯದಲ್ಲಿ ಒಂದನೇ ತರಗತಿಯನ್ನು ಆರಂಭಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಲಾಗಿದೆ. ದಸರಾ ಮುಗಿದ ತಕ್ಷಣ ಕೋವಿಡ್-19 ತಾಂತ್ರಿಕ ಸಮಿತಿಯ ಸಭೆ ಕರೆದು ಚರ್ಚೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಹೆಮ್ಮಾಡಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 48,000ಕ್ಕೂ ಅಧಿಕ ಸರಕಾರಿ ಶಾಲೆಗಳಿವೆ. ಆಡಳಿತಾತ್ಮಕ ದೃಷ್ಟಿಯಲ್ಲಿ ಶಿಕ್ಷಣವು ಬಹಳ ದೊಡ್ಡ ಕ್ಷೇತ್ರವಾಗಿದೆ. ಶಿಕ್ಷಣ ಕ್ಷೇತ್ರದ ಬೇರೆ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಗೆಹರಿಸಲು ಸಾಧ್ಯವಾಗದಿದ್ದರೂ, ಗರಿಷ್ಠ ಮಟ್ಟದಲ್ಲಿ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನ ಗಳು ನಡೆದಿವೆ. ಶಿಕ್ಷಕರ ಕೊರತೆ ನೀಗಿಸಲು ಹಾಗೂ ಗುಣಮಟ್ಟ ಹೆಚ್ಚಿಸಲು ಅನೇಕ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಾಲೆಯಿಂದ ವರ್ಗಾವಣೆ ಪತ್ರ ಬಯಸುವ ವಿದ್ಯಾರ್ಥಿಗಳಿಗೆ ಆಯಾ ಶಾಲೆಯ ಮುಖ್ಯಸ್ಥರು ವರ್ಗಾವಣೆ ಪತ್ರ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬ ಸೂಚನೆಯನ್ನು ಶಿಕ್ಷಣ ಇಲಾಖೆಯಿಂದ ನೀಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿಯೂ ನೀಡುವ ಕುರಿತು ಕ್ರಮ ಕೈಗೊಳ್ಳ ಲಾಗಿದೆ. ವರ್ಗಾವಣೆ ಪತ್ರ ನೀಡದೆ ಇರುವ ಕುರಿತು ದೂರು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.





