ಇಂಡೋನೇಶ್ಯಾದ ಗುಹೆಯಲ್ಲಿ 7 ಸಾವಿರ ವರ್ಷ ಹಿಂದಿನ ಯುವತಿಯ ಮೃತದೇಹ ಪತ್ತೆ

photo: twitter.com/my234Radio
ಜಕಾರ್ತ, ಅ.6: ಇಂಡೋನೇಶ್ಯಾದಲ್ಲಿ ಪತ್ತೆಯಾದ 7,000 ವರ್ಷಗಳ ಹಿಂದೆ ಮೃತಪಟ್ಟ ಯುವತಿಯ ಮೃತದೇಹದಲ್ಲಿನ ಅನುವಂಶಿಕ ಕುರುಹುಗಳು ದೇಶದ ಆದಿ ಮಾನವರು ಹಾಗೂ ಸೈಬೀರಿಯಾದಿಂದ ವಲಸೆ ಬಂದವರ ಸಮ್ಮಿಶ್ರಣ ಈ ಹಿಂದೆ ಯೋಚಿಸಿದ್ದಕ್ಕಿಂತಲೂ ಮೊದಲೇ ನಡೆದಿರುವ ಕುರಿತ ಹೆಚ್ಚಿನ ಸುಳಿವು ಒದಗಿಸಿದೆ ಎಂದು ಮಾಧ್ಯಮದ ವರದಿ ಹೇಳಿದೆ.
ಇಂಡೋನೇಶ್ಯಾದ ಗುಹೆಯಲ್ಲಿ ಧಾರ್ಮಿಕ ಪದ್ಧತಿಯಂತೆ ಸಮಾಧಿ ಮಾಡಲಾಗಿದ್ದ ಯುವತಿಯ ಡಿಎನ್ಎ ಅಥವಾ ಅನುವಂಶಿಕ ಬೆರಳಚ್ಚಿನ ಮಾಹಿತಿಯ ವಿಶ್ಲೇಷಣೆಯು ಏಶ್ಯಾದಲ್ಲಿ ಮಾನವರ ವಲಸೆ ಆರಂಭದ ಕುರಿತ ಸಿದ್ಧಾಂತವನ್ನು ಮಾರ್ಪಾಡಿಸಬಹುದು. ಈ ಮಾನವ ಅವಶೇಷವನ್ನು ಈಗ ದಕ್ಷಿಣ ಸುಲವೆಸಿಯ ಮಕಸ್ಸರ್ ನಗರದ ವಿವಿಯಲ್ಲಿ ಸಂರಕ್ಷಿಸಿಡಲಾಗಿದೆ ಎಂದು ಆಗಸ್ಟ್ ನಲ್ಲಿ ವೈಜ್ಞಾನಿಕ ನಿಯತಕಾಲಿಕೆ ‘ನೇಚರ್’ನಲ್ಲಿ ಪ್ರಕಟವಾದ ಲೇಖನದಲ್ಲಿ ಉಲ್ಲೇಖಿಸಲಾಗಿದೆ ಎಂದು ‘ದಿ ರಾಯ್ಟರ್ಸ್’ ವರದಿ ಮಾಡಿದೆ.
ಇಂಡೋನೇಶ್ಯಾದ ವಲೇಶಿಯಾ ಪ್ರದೇಶ ಮಾನವರ 2 ವಂಶ(ವರ್ಗ)ಗಳಾದ ಡೆನಿಸೊವಾನ್ ಮತ್ತು ಹೊಮೊಸೇಪಿಯನ್ಸ್ (ಆಧುನಿಕ ಮಾನವರ ಆರಂಭಿಕ ಸಂತತಿ)ಗಳ ಸಮಾಗಮ ಕೇಂದ್ರವಾಗಿರುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯಾದ ಗ್ರಿಫಿತ್ ವಿವಿಯ ಪುರಾತತ್ವ ಶಾಸ್ತ್ರಜ್ಞ ಬಸ್ರಾನ್ ಬರ್ಹಾನ್ ಹೇಳಿದ್ದಾರೆ. ಡೆನಿಸೊವಾನ್ ಪ್ರಾಚೀನ ಮಾನವರ ಒಂದು ಸಮೂಹವಾಗಿದ್ದು ಈ ವಂಶದ ಕುರಿತ ಅನುವಂಶಿಕ ಕುರುಹುಗಳು ಸೈಬೀರಿಯಾದಲ್ಲಿ ಪತ್ತೆಯಾಗಿದೆ. ದಕ್ಷಿಣ ಸುಲಾವೆಸಿ ಸೇರಿದಂತೆ ವಲೇಶಿಯಾ ಪ್ರದೇಶಗಳಲ್ಲಿನ ಲೀಂಗ್ ಪ್ಯಾನಿಂಗ್ ಗುಹೆಗಳ ಸಮೂಹದಲ್ಲಿ ದೇಹದ ಮೇಲೆ ಕಲ್ಲು ಮುಚ್ಚಿರುವ ಮಾನವರ ದೇಹ ಉತ್ಖನನದ ಸಂದರ್ಭ ಪತ್ತೆಯಾಗಿತ್ತು. ಇದರಲ್ಲಿ, ವಿಜ್ಞಾನಿಗಳು ಬೆಸ್ಸಿ ಎಂದು ಹೆಸರಿಟ್ಟ ಯುವತಿಯ ಮೃತದೇಹ ಈ ಪ್ರದೇಶದಲ್ಲಿ ಪತ್ತೆಯಾದ ಅತ್ಯುತ್ತಮವಾಗಿ ಸಂರಕ್ಷಿಸಿರುವ ಮಾದರಿಯಾಗಿದೆ. ಈ ಯುವತಿ ಆಗ್ನೇಯ ಏಶ್ಯಾ ಮತ್ತು ಓಶಿಯಾನಾ ಪ್ರದೇಶದಲ್ಲಿನ ಆಸ್ಟ್ರೊನೇಶಿಯನ್ ಸಂತತಿಗೆ ಸೇರಿದವಳು. ಆದರೆ ಈಕೆಯ ದೇಹದಲ್ಲಿ ಡೆನಿಸೊವಾನ್ ಅನುವಂಶಿಕ ಕುರುಹುಗಳೂ ಇವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ನವಶಿಲಾಯುಗದ ಪೂರ್ವಕಾಲದ ಕುರುಹು ಹಾಗೂ ಈಗಿನ ಪಪುವ ಮತ್ತು ಆಸ್ಟ್ರೇಲಿಯಾದ ಸ್ಥಳೀಯ ಸಮುದಾಯದಲ್ಲಿನ ಅನುವಂಶಿಕ ಕುರುಹಿಗೂ ಸಾಮ್ಯತೆಯಿರುವುದು ವಿಶ್ಲೇಷಣೆಯಿಂದ ತಿಳಿದುಬಂದಿದೆ ಎಂದು ಲೇಖನದಲ್ಲಿ ವಿವರಿಸಲಾಗಿದೆ.







