ಉಡುಪಿ : ಗಾಳಿಮಳೆಗೆ 90 ಮನೆಗಳಿಗೆ ಹಾನಿ, 45 ಲಕ್ಷ ರೂ. ನಷ್ಟ

ಉಡುಪಿ, ಅ.6: ಕುಂದಾಪುರ ತಾಲೂಕಿನ ಅಂಪಾರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸುರಿದ ಗುಡುಗು ಸಹಿತ ಭಾರೀ ಗಾಳಿಮಳೆಗೆ ಒಟ್ಟು 90 ಮನೆಗಳಿಗೆ ಹಾನಿಯಾಗಿದ್ದು, ಇದರಿಂದ ಸುಮಾರು 45ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಬುಧವಾರ ಕೂಡ ಜಿಲ್ಲೆಯಲ್ಲಿ ಮೊಡ ಕವಿದ ವಾತಾವರಣ ಇದ್ದು, ಹಲವೆಡೆ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿಯಲ್ಲಿ 10.6 ಮಿ.ಮೀ., ಬ್ರಹ್ಮಾವರದಲ್ಲಿ 8.5 ಮಿ.ಮೀ., ಕಾಪುವಿನಲ್ಲಿ 6.2 ಮಿ.ಮೀ., ಕುಂದಾಪುರದಲ್ಲಿ 26.4 ಮೀ.ಮೀ., ಬೈಂದೂರಿನಲ್ಲಿ 6.6ಮಿ.ಮೀ, ಕಾರ್ಕಳದಲ್ಲಿ 56.4 ಮಿ.ಮೀ., ಹೆಬ್ರಿಯಲ್ಲಿ 14.2 ಮಿ.ಮೀ. ಹಾಗೂ ಸರಾಸರಿ 18.4 ಮಿ.ಮೀ. ಮಳೆಯಾಗಿದೆ.
ಅ.5ರಂದು ಸಂಜೆ ಬೀಸಿದ ಭಾರೀ ಸುಂಟರಗಾಳಿಗೆ ತತ್ತರಿಸಿದ ಹೋದ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದಲ್ಲಿ ಒಟ್ಟು 65 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಇದರಿಂದ ಒಟ್ಟು 30-40ಲಕ್ಷ ರೂ. ನಷ್ಟ ಉಂಟಾಗಿದೆ. ಅದೇ ರೀತಿ 1500 ಅಡಿಕೆ, 800-900 ತೆಂಗು, ಐದು ಎಕರೆ ಭತ್ತದ ಕೃಷಿಗೆ ಹಾನಿ ಯಾಗಿದೆ. ಸುಮಾರು 75-80 ವಿದ್ಯುತ್ ಕಂಬಗಳು ಧರೆಗೆ ಉರುಳಿವೆ ಎಂದು ಕಂದಾಯ ನಿರೀಕ್ಷಕ ರಾಘವೇಂದ್ರ ಡಿ. ತಿಳಿಸಿದ್ದಾರೆ.
ಶಂಕರನಾರಾಯಣ ಗ್ರಾಮದ ಆರು ಮನೆಗಳಿಗೆ ಹಾನಿಯಾಗಿ ಒಟ್ಟು 1.60 ಲಕ್ಷ ರೂ. ನಷ್ಟ ಉಂಟಾಗಿದೆ. ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಸಂಕ್ರಿ ಎಂಬವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿ 60,000ರೂ. ನಷ್ಟವಾಗಿದೆ. ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಮೂರು ಮನೆಗಳಿಗೆ ಹಾನಿಯಾಗಿ ಒಟ್ಟು 1ಲಕ್ಷ ರೂ. ನಷ್ಟ ಉಂಟಾಗಿದೆ.
ನಂಚಾರು ಗ್ರಾಮದ ಮೂರು ಮನೆಗಳು ಭಾಗಶಃ ಹಾನಿಯಾಗಿ 1.10ಲಕ್ಷ ರೂ. ನಷ್ಟವಾಗಿದೆ. ಆವರ್ಸೆ ಗ್ರಾಮದ ಐದು ಮನೆಗಳಿಗೆ, ಹಿಲಿಯಾಣ ಗ್ರಾಮದ ಐದು ಮನೆಗಳಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
ಹಾಲಾಡಿ ಗ್ರಾಮದಲ್ಲಿ ಎರಡು ಅಡಿಕೆ ತೋಟಗಳಿಗೆ ಹಾನಿಯಾಗಿ ಒಟ್ಟು 47ಸಾವಿರ ರೂ. ನಷ್ಟವಾಗಿದೆ. ಬ್ರಹ್ಮಾವರ ತಾಲೂಕಿನ ನಂಚಾರು ಗ್ರಾಮದಲ್ಲಿ ಅಡಿಕೆ ಮತ್ತು ತೆಂಗು ತೋಟಗಳಿಗೆ ಹಾನಿಯಾಗಿ ಒಟ್ಟು 80,000ರೂ. ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಮೆಸ್ಕಾಂಗೆ 15ಲಕ್ಷ ರೂ. ನಷ್ಟ
ಉಡುಪಿ ಜಿಲ್ಲೆಯಲ್ಲಿ ಗಾಳಿಮಳೆಯಿಂದ ಒಟ್ಟು 150 ವಿದ್ಯುತ್ ಕಂಬ, 10 ಟ್ರಾನ್ಸ್‌ಫಾರ್ಮ, 3 ಕಿ.ಮೀ. ಉದ್ದ ವಿದ್ಯುತ್ ತಂತಿಗೆ ಹಾನಿಯಾಗಿದೆ. ಇದರಿಂದ ಸುಮಾರು 15 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಕುಂದಾಪುರ ಹಾಗೂ ಬ್ರಹ್ಮಾವರ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ವಿದ್ಯುತ್ ಕಂಬ ಹಾಗೂ ತಂತಿ ಹಾನಿಯಾಗಿದೆ. ಮೆಸ್ಕಾಂ ಸಿಬ್ಬಂದಿಗಳ 15 ತಂಡ ವಿವಿಧ ಕಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಸ್ಕಾಂ ಅಧೀಕ್ಷಕ ನರಸಿಂಹ ಪಂಡಿತ್ ತಿಳಿಸಿದ್ದಾರೆ.







