ಪಡುಬಿದ್ರಿ ಎಂಡ್ ಪಾಯಿಂಟ್‌ನಲ್ಲಿ 75ನೇ ಅಮೃತಮಹೋತ್ಸವ
ಉಡುಪಿ, ಅ.6: ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದಿರುವ ಪಡುಬಿದ್ರಿ ಎಂಡ್ ಪಾಯಿಂಟ್ ಕಡಲ ತೀರದಲ್ಲಿ ಎರಡು ದಿನಗಳ ಕಾಲ ಭಾರತದ 75ನೇ ಅಝಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ 10ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಉದ್ಘಾಟಿಸುವರು. ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪಾಲ್ಗೊಳ್ಳುವರು. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಪರಿಸರ ಮಂತ್ರಾಲಯ ಅರಣ್ಯ ಮತ್ತು ಹವಾಮಾನ ಬದಲಾವಣೆ ಭಾರತ ಸರಕಾರ, ಸೊಸೈಟಿ ಆಫ್ ಇಂಟಗ್ರೆಟ್ ಕೋಸ್ಟಲ್ ಮ್ಯಾನೇಜ್‌ಮೆಂಟ್ ಹಾಗೂ ಬೀಚ್ ಮ್ಯಾನೇಜ್ ಮೆಂಟ್ ಕಮಿಟಿ ಇವುಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆಸ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೊ ತಿಳಿಸಿದ್ದಾರೆ.
ಅಝಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಪರಿಸರ, ಅರಣ್ಯ ಮತ್ತು ವಹಾಮಾನ ಬದಲಾವಣೆ ಸಚಿವಾಲಯ ರಾಷ್ಟ್ರೀಯ ಮಟ್ಟದ ಪರಿಸರ ಶಿಕ್ಷಣ ಅಭಿಯಾನವನ್ನು ಆಯೋಜಿಸಿದೆ. ಜನರಿಗೆ ನಿರಂತರ ಅರಿವು ಮತ್ತು ಶಿಕ್ಷಣ ದೊಂದಿಗೆ ಕಡಲ ತೀರಗಳ ಸಾಂಪ್ರದಾಯಿಕ ಸೌಂದರ್ಯವನ್ನು ಉಳಿಸಿ ಕೊಳ್ಳುವುದು ಮುಖ್ಯ ಉದ್ದೇಶವಾಗಿದೆ.
ದೇಶದಲ್ಲೀಗ ಒಟ್ಟು 10 ಕಡಲ ತೀರಗಳಿಗೆ ಬ್ಲೂ ಫ್ಲ್ಯಾಗ್ ಮಾನ್ಯತೆ ನೀಡಲಾಗಿದೆ. ಹಿಂದಿನ ಎಂಟು ಬೀಚ್‌ಗಳೊಂದಿಗೆ 2021-22ನೇ ಸಾಲಿನಲ್ಲಿ ಎರಡು ಬೀಚ್‌ಗಳಿಗೆ ಈ ಮಾನ್ಯತೆ ನೀಡಲಾಗಿದೆ. ಈ ಮೂಲಕ ಕರ್ನಾಟಕದ ಪಡುಬಿದ್ರಿ, ಕಾಸರಕೋಡ್, ಗುಜರಾತ್‌ನ ಶಿವರಾಜಪುರ, ದಿಯು ಘೋಘ್ಲಾ, ಕೇರಳದ ಕಪ್ಪದ್, ಆಂಧ್ರಪ್ರದೇಶದ ಋಷಿಕೊಂಡ, ಒಡಿಸ್ಸಾದ ಗೋಲ್ಡನ್ ಹಾಗೂ ಅಂಡಮಾನ್‌ನ ರಾಧಾನಗರ ಬೀಚ್‌ಗಳೊಂದಿಗೆ ಈ ಬಾರಿ ತಮಿಳುನಾಡಿನ ಕೋವಲಂ ಹಾಗೂ ಪುದುಚೇರಿಯ ಈಡನ್ ಬೀಚ್‌ಗಳಿಗೂ ಬ್ಲೂ ಫ್ಲ್ಯಾಗ್ ಮಾನ್ಯತೆ ದೊರೆತಿದೆ. ಇವುಗಳ ಅಭಿವೃದ್ಧಿ ಕಾರ್ಯಗಳಿಗೆ 2020ರ ಜನವರಿ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು.
ಭಾರತ ಸರಕಾರವು ಮುಂದಿನ ಐದು ವರ್ಷಗಳಲ್ಲಿ 100ಕ್ಕಿಂತ ಅಧಿಕ ಬೀಚ್ ಗಳನ್ನು ಅಭಿವೃದ್ಧಿಪಡಿಸಲು ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.







