ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ

ಮೈಸೂರು,ಅ.6: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣಗೆ ಆರಂಭವಾಗಿದ್ದು, ಗುರುವಾರ ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಂದ ಅಧಿಕೃತ ಚಾಲನೆ ದೊರೆಯಲಿದೆ.
ಚಾಮುಂಡಿ ಬೆಟ್ಟದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದು, ನಾಡ ದೇವತೆ ಶ್ರೀಚಾಮುಂಡೇಶ್ವರಿ ತಾಯಿಗೆ ಅಗ್ರಪೂಜೆಯೊಂದಿಗೆ ಬೆಳಿಗ್ಗೆ 08.15 ರಿಂದ 08.45 ರೊಳೆ ಸಲ್ಲುವ ಶುಭ ಮೂಹೂರ್ತದಲ್ಲಿ ದೇವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಉದ್ಘಾಟನೆ ಮಾಡಲಿದ್ದಾರೆ.
ಈಗಾಗಲೇ ಚಾಮುಂಡಿ ಬೆಟ್ಟದಲ್ಲಿ ಜಿಲ್ಲಾಢಳಿತದ ವತಿಯಿಂದ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರುಗಳಾದ ಪ್ರಲ್ಹಾದ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ, ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಚಿವರುಗಳಾದ ಎಸ್.ಟಿ.ಸೋಮಶೇಖರ್, ವಿ.ಸುನೀಲ್ ಕುಮಾರ್, ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್, ಆನಂದ್ ಸಿಂಗ್ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಸಚಿವರುಗಳಾದ ಆರ್.ಅಶೋಕ್, ಬಿ.ಸಿ.ಪಾಟೀಲ್, ಅರಬೈಲ್ ಹೆಬ್ಬಾರ್ ಶಿವರಾಮ್, ಬಿ.ಬಸವರಾಜು (ಭೈರತಿ), ಡಾ.ಕೆ.ಸುಧಾಕರ್, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಆಗಮಿಸಲಿದ್ದು, ಈ ಭಾಗದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.







