ಕಾಫಿನಾಡಿನಲ್ಲಿ ಧಾರಾಕಾರ ಮಳೆಗೆ ಭಾರೀ ನಷ್ಟ: ತರೀಕೆರೆಯಲ್ಲಿ ಹಲವೆಡೆ ಸಂಪರ್ಕ ಕಡಿತ, ಅಡಿಕೆ ತೋಟಗಳು ಜಲಾವೃತ

ಚಿಕ್ಕಮಗಳೂರು, ಅ.6: ಹವಾಮಾನ ವೈಫರೀತ್ಯದ ಪರಿಣಾಮ ಕಾಫಿನಾಡಿನಲ್ಲಿ ಕಳೆದ ಎರಡು ದಿನಗಳಿಂದ ಬೆಳಗ್ಗೆ, ಸಂಜೆ ಹಾಗೂ ರಾತ್ರಿ ವೇಳೆ ಧಾರಾಕಾರ ಮಳೆಯಾಗುತ್ತಿದ್ದು, ಮಂಗಳವಾರ ರಾತ್ರಿ ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಆಗಾಗ್ಗೆ ಸಾಧಾರಣ ಮಳೆ ಸುರಿದಿದ್ದು, ಸೋಮವಾರ ಹಾಗೂ ಮಂಗಳವಾರ ರಾತ್ರಿ ಭಾರೀ ಮಳೆ ಸುರಿದಿದೆ. ಜಿಲ್ಲೆಯ ಮಲೆನಾಡು ಭಾಗ ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ, ಎನ್.ಆರ್.ಪುರ ತಾಲೂಕುಗಳಲ್ಲದೇ ಬಯಲು ಭಾಗದ ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಭಾರೀ ಮಳೆ ಸುರಿದ ಪರಿಣಾಮ ಹಲವೆಡೆ ಭೂ ಕುಸಿತ, ಜಮೀನು ಹಾನಿ ಸಂಭವಿಸಿದ್ದು, ಮಲೆನಾಡು ಭಾಗದಲ್ಲಿ ನೂರಾರು ಮರಗಳು ಧರೆಗುರುಳಿವೆ. ಅಲ್ಲದೇ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿ ಮಲೆನಾಡು ಭಾಗದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮೂಡಿಗೆರೆ ತಾಲೂಕಿನ ಕಳಸ ಪಟ್ಟಣ ಸಮೀಪದ ಮುಳ್ಳೋಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಮೂವರು ರೈತರಿಗೆ ಸೇರಿದ್ದ ಸುಮಾರು ಒಂದೂವರೆ ಎಕರೆ ಕೃಷಿ ಜಮೀನು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಭಾರೀ ನಷ್ಟ ಸಂಭವಿಸಿದೆ. ಮಂಗಳವಾರ ಸಂಜೆ ತೋಟಗಳಲ್ಲಿ ಕೆಲಸ ಮಾಡಿ ಮನೆಗೆ ಹೋಗಿದ್ದ ರೈತರು ಬುಧವಾರ ಬೆಳಗ್ಗೆ ತೋಟಕ್ಕೆ ಹೋದಾಗ ತೋಟದ ಚಿತ್ರಣವೇ ಬದಲಾಗಿತ್ತು. ಮುಳ್ಳೋಡಿ ಗ್ರಾಮದಲ್ಲಿದ್ದ ಕಿರು ಸೇತುವೆಯ ಹಳ್ಳದಲ್ಲಿ ನೀರು ಕಟ್ಟಿಕೊಂಡು ನೀರು ತೋಟಗಳಲ್ಲಿ ಹರಿದ ಪರಿಣಾಮ ಮೂವರು ರೈತರ ತೋಟಕ್ಕೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಮೂಡಿಗೆರೆ ತಾಲೂಕಿನ ಮೇಗೂರು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುನೀಲ್ ಎಂಬವರ ಮನೆಯೊಂದರ ಗೋಡೆ, ಕಾಂಪೌಂಡ್ ಕುಸಿದು ಬಿದ್ದಿದ್ದು, ಕಳೆದ ವರ್ಷ ಈ ಗ್ರಾಮದಲ್ಲಿ ಹಲವು ಮನೆಗಳು ಕುಸಿದಿದ್ದು, ಇನ್ನೂ ಕೆಲ ಮನೆಗಳಿಗೆ ಪರಿಹಾರ ಸಿಕ್ಕಿಲ್ಲ. ಮೂಡಿಗೆರೆ ತಾಲೂಕಿನ ಗಬ್ಗಲ್ ಗ್ರಾಮದಲ್ಲಿ ಕಿರು ಸೇತುವೆಯೊಂದು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದೆ. ಕೊಟ್ಟಿಗೆಹಾರದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ವಿದ್ಯುತ್ ಕಂಬವೊಂದು ಆಟೊ ಮೇಲೆ ಬಿದ್ದು, ಆಟೊ ಜಖಂಗೊಂಡಿದ್ದಲ್ಲದೇ ಕೆಲ ಅಂಗಡಿಗಳಿಗೆ ಮಳೆ ನೀರು ನುಗ್ಗಿ ನಷ್ಟ ಉಂಟಾಗಿತ್ತು.
ಭಾರೀ ಮಳೆಯಿಂದಾಗಿ ಮಲೆನಾಡಿನಾದ್ಯಂತ ರಸ್ತೆ ಬದಿಯಲ್ಲಿ ನೂರಾರು ಮರಗಳು ನೆಲಕ್ಕುರುಳಿದ ಪರಿಣಾಮ ರಸ್ತೆ ಬದಿಯಲ್ಲಿದ್ದ ನೂರಾರು ವಿದ್ಯುತ್ ಕಂಬಗಳು ತುಂಡಾಗಿದ್ದು, ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಗಳನ್ನು ಬದಲಾಯಿಸುವಲ್ಲಿ ನಿರತರಾಗಿದ್ದಾರೆ. ಮಲೆನಾಡು ಭಾಗದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಸೋಮವಾರ, ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಮಲೆನಾಡು ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದ ಭದ್ರಾ, ತುಂಗಾ, ಹೇಮಾವತಿ ಸೇರಿದಂತೆ ಸಣ್ಣ ಸಣ್ಣ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿಗಳು ಅಪಾಯದ ಮಟ್ಟ ತಲುಪದ ಪರಿಣಾನ ನದಿ ಪಾತ್ರದ ಗ್ರಾಮಗಳ ನಿವಾಸಿಗಳು ನಿಟ್ಟುಸಿರುವ ಬಿಟ್ಟಿದ್ದಾರೆ. ಮಲೆನಾಡಿನಲ್ಲಿ ಸದ್ಯ ಅಡಿಕೆ ಕೊಯ್ಲು ಆರಂಭವಾಗಿದ್ದು, ಭಾರೀ ಮಳೆಯಿಂದಾಗಿ ಅಡಿಕೆ ಸಂಸ್ಕರಣೆಗೂ ಅಡಚಣೆ ಉಂಟಾಗಿದೆ. ಕಾಫಿ ತೋಟದ ಕೃಷಿ ಚಟುವಟಿಕೆಗೂ ಸಮಸ್ಯೆಯಾಗಿದ್ದು, ಭಾರೀ ಮಳೆಗೆ ಕಾಫಿ, ಕಾಳು ಮೆಣಸು ಉದುರಲಾರಂಭಿಸಿವೆ.
ಇನ್ನು ಚಿಕ್ಕಮಗಳೂರು ತಾಲೂಕಿನಲ್ಲೂ ಕಳೆದ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಧಾರಾಕಾರ ಮಳೆಯಾಗಿದೆ. ರಾತ್ರಿ ಸುರಿದ ಮಳೆಯಿಂದಾಗಿ ನಗರದ ಕೆಲ ರಸ್ತೆಗಳಲ್ಲಿ ಕಾಮಗಾರಿ ಕಾರಣಕ್ಕೆ ನೀರು ಚರಂಡಿಯಲ್ಲಿ ಹರಿಯದೇ ರಸ್ತೆ ಮೇಲೆ ನಿಂತು ವಾಹನ ಸಂಚಾರ, ಪಾದಚಾರಿಗಳ ಸಂಚಾರಕ್ಕೂ ತೊಂದರೆಯಾಗಿತ್ತು. ಜಿಲ್ಲೆಯ ಕಡೂರು ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಪಟ್ಟಣದ ತಗ್ಗು ಪ್ರದೇಶದ ಅಂಗಡಿ, ಮನೆಗಳಿಗೆ ಚರಂಡಿ, ರಸ್ತೆ ನೀರು ನುಗ್ಗಿ ಜನರ ಪರದಾಡಿದರು. ಇನ್ನು ತರೀಕೆರೆ ತಾಲೂಕು ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗಿದ್ದು, ಪಟ್ಟಣದ ರಾ.ಹೆದ್ದಾರಿಯಲ್ಲಿ ರಾತ್ರಿ, ಬೆಳಗ್ಗೆ ಸುರಿದ ಮಳೆಗೆ 1 ಅಡಿ ನೀರು ನಿಂತ ಪರಿಣಾಮ ಇಡೀ ರಸ್ತೆ ನದಿಯಂತೆ ಕಂಡು ಬಂತು. ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಅರ್ಧ ಭಾಗ ನೀರಿನಲ್ಲಿ ಮುಳುಗಡೆಯಾಗಿದ್ದವು. ಸುಣ್ಣದ ಕೆರೆ ಗ್ರಾಮದಲ್ಲಿ ಭಾರೀ ಮಳೆಗೆ ಕೆರೆ ಕೋಡಿಬಿದ್ದಿದ್ದು, ತಾಲೂಕಿನ ನೇರಲಕೆರೆ-ತರೀಕೆರೆ ಸಂಪರ್ಕದ ಸೇತುವೆಯೊಂದು ಹಳ್ಳದ ನೀರಿನಲ್ಲಿ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.
ಅಲ್ಲದೇ ಇಟ್ಟಿಗೆ ಗ್ರಾಮ ತರೀಕೆರೆ ಪಟ್ಟಣ ಸಂಪರ್ಕದ ಸೇತುವೆಯೂ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ.ತಾಲೂಕಿನ ನೇರಲಕೆರೆ, ಹುಣಸಘಟ್ಟ ಗ್ರಾಮಗಳಲ್ಲಿ ಭಾರೀ ಮಳೆ ಮುಂದುವರಿದ ಪರಿಣಾಮ ಅಡಿಕೆ ತೋಟಗಳಲ್ಲಿ ಭಾರೀ ನೀರು ಸಂಗ್ರಹವಾಗಿದ್ದು, ಬೆಳೆಗಾರರು ಬೆಳೆ ನಷ್ಟದ ಆತಂಕದಲ್ಲಿದ್ದಾರೆ.







