2002ರ ನಕಲಿ ಎನ್ ಕೌಂಟರ್ ಪ್ರಕರಣ: ಆರೋಪಿ ನಿವೃತ್ತ ಪೊಲೀಸ್ ಅಧಿಕಾರಿ ನ್ಯಾಯಾಲಯದ ಮುಂದೆ ಶರಣು
ಭುವನೇಶ್ವರ (ಉತ್ತರಪ್ರದೇಶ), ಅ. 6: 2002ರ ನಕಲಿ ಎನ್ ಕೌಂಟರ್ ಗೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ನಿವೃತ್ತ ಪೊಲೀಸ್ ಸರ್ಕಲ್ ಅಧಿಕಾರಿ ಬುಧವಾರ ನ್ಯಾಯಾಲಯದ ಮುಂದೆ ಶರಣಾಗತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿವೃತ್ತ ಪೊಲೀಸ್ ಸರ್ಕಲ್ ಅಧಿಕಾರಿ ರಣದೀರ್ ಸಿಂಗ್ ಬಗ್ಗೆ ಮಾಹಿತಿ ನೀಡಿದರೆ 25,000 ರೂಪಾಯಿ ಬಹುಮಾನ ನೀಡಲಾಗುವುದು ಎಂದು ಮಂಗಳವಾರ ಘೋಷಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಬಿಟೆಕ್ ವಿದ್ಯಾರ್ಥಿಯನ್ನು ಎನ್ಕೌಂಟರ್ ಮಾಡಿದ ಈ ಪ್ರಕರಣದಲ್ಲಿ 8 ಮಂದಿ ಪೊಲೀಸರು ಆರೋಪಿಗಳಾಗಿದ್ದಾರೆ.
ಬಸ್ ದರೋಡೆಯಲ್ಲಿ ಭಾಗಿಯಾಗಿದ್ದಾನೆ ಎಂದು ಪ್ರತಿಬಿಂಬಿಸಿದ ಬಳಿಕ ಶಹ್ಪಾನಿ ನಿವಾಸಿ ಪ್ರದೀಪ್ನನ್ನು 2002ರಲ್ಲಿ ಜಿಲ್ಲೆಯ ಸಿಖಂದರಾಬಾದ್ನಲ್ಲಿ ನಕಲಿ ಎನ್ಕೌಂಟರ್ ನಡೆಸಿ ಹತ್ಯೆಗೈಯಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಕ್ರೈಮ್ ಬ್ರಾಂಚ್-ಕ್ರಿಮಿನಲ್ ತನಿಖಾ ವಿಭಾಗ (ಸಿಬಿಸಿಐಡಿ)ಕ್ಕೆ ವರ್ಗಾಯಿಸಲಾಗಿತ್ತು. ಆದರೆ, ಅದು ಪ್ರಕರಣವನ್ನು ಮುಚ್ಚಿ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಪ್ರದೀಪ್ನ ತಂದೆ ಯಶ್ಪಾಲ್ ಸಲ್ಲಿಸಿದ ದೂರಿನ ಆಧಾರದಲ್ಲಿ ವಿಚಾರಣಾ ನ್ಯಾಯಾಲಯ ಪ್ರಕರಣದ ವಿಚಾರಣೆ ಆರಂಭಿಸಿತ್ತು. ಅಲ್ಲದೆ, ಈ ಎನ್ಕೌಂಟರ್ನಲ್ಲಿ ಭಾಗಿಯಾಗಿದ್ದ ಪೊಲೀಸರ ವಿರುದ್ಧ ಸಮನ್ಸ್ ಹಾಗೂ ವಾರಂಟ್ ಜಾರಿಗೊಳಿಸಿತ್ತು.
ನ್ಯಾಯಾಲಯ ಇದುವರೆಗೆ ಐವರು ಪೊಲೀಸರಿಗೆ ಜಾಮೀನು ಮಂಜೂರು ಮಾಡಿದೆ. ಉಳಿದವರ ವಿರುದ್ಧ ವಾರಂಟ್ ಜಾರಿಗೊಳಿಸಲಾಗಿದೆ. ಓರ್ವ ಆರೋಪಿ ಸೆಪ್ಟಂಬರ್ 20ರಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದ. ಇತರ ಇಬ್ಬರನ್ನು ಸೆಪ್ಟಂಬರ್ 22 ಹಾಗೂ 24ರಂದು ಜಿಲ್ಲಾ ಪೊಲೀಸರು ಬಂಧಿಸಿದ್ದರು.







