ಮುಂಬೈ ಮಾದಕ ದ್ರವ್ಯ ಪ್ರಕರಣ: ಎನ್ಸಿಬಿ ಕಸ್ಟಡಿಯಲ್ಲಿರುವ ಆರ್ಯನ್ ಗೆ ವಿಜ್ಞಾನ ಪುಸ್ತಕ ಪೂರೈಕೆ
ಲಕ್ನೋ, ಅ. 6: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತನಾಗಿ ಅಕ್ಟೋಬರ್ 7ರವರೆಗೆ ಮಾದಕದ್ರವ್ಯ ನಿಯಂತ್ರಣ ಬ್ಯೂರೊ (ಎನ್ಸಿಬಿ)ದ ಕಸ್ಟಡಿಗೆ ಒಳಗಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ಗೆ ಅವರ ಬೇಡಿಕೆಯಂತೆ ವಿಜ್ಞಾನದ ಪುಸ್ತಕಗಳನ್ನು ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಆರ್ಯನ್ ಖಾನ್ ಹಾಗೂ ಇತರ ಆರೋಪಿಗಳ ಮೊಬೈಲ್ ಫೋನ್ ಅನ್ನು ಗಾಂಧಿನಗರದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಮುಂಬೈ ಕರಾವಳಿಯಲ್ಲಿದ್ದ ಪ್ರಯಾಣಿಕರ ಹಡಗಿನಲ್ಲಿ ನಿಷೇಧಿತ ಮಾದಕ ದ್ರವ್ಯವನ್ನು ವಶಪಡಿಸಿರುವುದಕ್ಕೆ ಸಂಬಂಧಿಸಿ ಎನ್ಸಿಬಿ ನಾಲ್ಕು ಮಂದಿಯನ್ನು ಬಂಧಿಸಿತ್ತು.
ಈ ನಾಲ್ವರು ದಿಲ್ಲಿ ಮೂಲದ ಕಾರ್ಯಕ್ರಮ ಆಯೋಜನೆ ಸಂಸ್ಥೆ ‘ನಾಮಾಸ್ ಕ್ರೆಯ ’ ಸಿಬ್ಬಂದಿ. ಎನ್ಸಿಬಿ ಶನಿವಾರ ಗೋವಾಕ್ಕೆ ತೆರಳುವ ಪ್ರಯಾಣಿಕರ ಹಡಗಿನ ಮೇಲೆ ದಾಳಿ ನಡೆಸಿ ಮಾದಕ ದ್ರವ್ಯವವನ್ನು ವಶ ಪಡಿಸಿಕೊಂಡ ಬಳಿಕ ಆರ್ಯನ್ ಖಾನ್, ಅರ್ಬಾಝ್ ಮರ್ಚಂಟ್ ಹಾಗೂ ಮುನ್ಮುನ್ ಧಮೇಖಾ ಸೇರಿದಂತೆ 9 ಮಂದಿಯನ್ನು ಬಂಧಿಸಿತ್ತು. ಮುಂಬೈಯಲ್ಲಿರುವ ಎಸ್ಪ್ಲಾನೆಡೆಯ ದಂಡಾಧಿಕಾರಿ ನ್ಯಾಯಾಲಯ ಪ್ರಕರಣದ ಹಲವು ಆರೋಪಿಗಳನ್ನು ಅಕ್ಟೋಬರ್ 11ರ ವರೆಗೆ ಎನ್ಸಿಬಿ ಕಸ್ಟಡಿಗೆ ನೀಡಿತ್ತು.







