ಬೆಂಗಳೂರು; ಕೊಡಿಗೇಹಳ್ಳಿಯಲ್ಲಿ ದಲಿತ ಕುಟುಂಬದ ಜಮೀನಿಗೆ ಬೇಲಿ, ಜಾತಿ ನಿಂದನೆ: ಆರೋಪ

ಬೆಂಗಳೂರು, ಅ.6: ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯ ಹಂತದಲ್ಲಿರುವ ದಲಿತ ಕುಟುಂಬಕ್ಕೆ ಸೇರಿದ ಜಮೀನನ್ನು ಆಂಧ್ರಪ್ರದೇಶದ ಬಿಲ್ಡರ್ ಹರಿಪ್ರಸಾದ್ ರೆಡ್ಡಿ ಹಾಗೂ ಚಂದ್ರಶೇಖರ್ ಅವರು ಅತಿಕ್ರಮವಾಗಿ ಬೇಲಿ ಹಾಕಿದ್ದಾರೆ. ಇದನ್ನು ಪ್ರಶ್ನಿಸಿದ ದಲಿತ ಕುಟುಂಬದ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದರೂ ದೂರು ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿರುವ ಘಟನೆ ನಗರದ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆ ವಿವರ: ಸೆ.17ರಂದು ಮಧ್ಯಾಹ್ನ ಬೆಂಗಳೂರು ಪೂರ್ವ ತಾಲೂಕು, ಕೆ.ಆರ್.ಪುರ ಹೋಬಳಿ, ಕೊಡಿಗೇಹಳ್ಳಿಯ ಸರ್ವೇ ನಂಬರ್ 53/5 ರಲ್ಲಿ ಏಕಾಏಕಿ ಜೆಸಿಬಿ ಯಂತ್ರದೊಂದಿಗೆ ಅತಿಕ್ರಮ ಪ್ರವೇಶ ಮಾಡಿ ನೆಲಮಾಳಿಗೆ ನಿರ್ಮಾಣಕ್ಕೆ ಮಣ್ಣನ್ನು ಅಗೆಯಲು ಪ್ರಯತ್ನಿಸಿದ್ದಾರೆ. ಈ ಜಮೀನಿನಿಂದ ಕೇವಲ 100 ಅಡಿಗಳ ದೂರದಲ್ಲಿರುವ ವಿವೇಕ್ ಅವರ ತಾಯಿ ಡಿ.ಕಾಂತಾ ಇದನ್ನು ತಡೆಯಲು ಪ್ರಯತ್ನಿಸಿದ ಸಂದರ್ಭದಲ್ಲಿ ಹರಿಪ್ರಸಾದ್ ರೆಡ್ಡಿ ಹಾಗೂ ಚಂದ್ರಶೇಖರ್ ನಮ್ಮ ಕಾರ್ಯಕ್ಕೆ ಅಡ್ಡಿಪಡಿಸಿದಲ್ಲಿ ಜೆಸಿಬಿ ಯಂತ್ರವನ್ನು ಹತ್ತಿಸಿ ಸಾಯಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ದಲಿತ ಜಾತಿಯ ಮಹಿಳೆಯನ್ನು ಕತ್ತು ಹಿಡಿದು ಹೊರಗೆ ದಬ್ಬು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಮಹಿಳೆಯನ್ನು ಅಮಾನುಷವಾಗಿ ಎಳೆದಾಡಿ ಹಲ್ಲೆ ಮಾಡಿ ಜಮೀನಿನಿಂದ ಹೊರಗೆ ತಳ್ಳಿದ್ದಾರೆ ಎಂದು ದೂರಲಾಗಿದೆ.
ಈ ಜಮೀನು ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿಯಿದೆ. ಅಲ್ಲದೆ ಈ ಬಗ್ಗೆ ಫಲಕವನ್ನು ಹಾಕಲಾಗಿದೆ. ಇಂತಹ ಸಂದರ್ಭದಲ್ಲಿ ಜಮೀನಿನಲ್ಲಿ ಅತಿಕ್ರಮಣ ಮಾಡಿರುವುದು ಅಲ್ಲದೆ ತಾಯಿಯ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ ಎಂದು ಹೇಳಿದ ಮಗ ವಿವೇಕ್ ಅವರ ಮೇಲೂ ಗುಂಪು ಹಲ್ಲೆ ಮಾಡಿದೆ. ಅಲ್ಲದೆ, ನಮಗೆ ಸ್ಥಳೀಯ ಪ್ರಭಾವಿ ಸಚಿವರ ಬೆಂಬಲವಿದೆ ಎಂದು ಹೇಳಿ ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ ಎಂದು ಕಾಂತಾ ಹಾಗೂ ವಿವೇಕ್ ದೂರಿದ್ದಾರೆ.
ದಲಿತ ಕುಟುಂಬದ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ ಮಾಡಿರುವ ಹಿನ್ನಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಜಾತಿ ನಿಂದನೆಯ ಕೇಸ್ ಕೂಡಾ ದಾಖಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಉದ್ದೇಶದಿಂದ ವೈಟ್‍ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ವಿಳಂಬ ಮಾಡದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ನಿಯಮಗಳ ಅನುಸಾರ ಪ್ರಕರಣ ದಾಖಲಿಸಲು ಸೆ.24 ರಂದು ಡಿಜಿ ಮತ್ತು ಐಜಿಪಿ ಆದೇಶ ನೀಡಿದ್ದಾರೆ.
ಅಕ್ರಮ ದಾಖಲೆ ನಿರ್ಮಾಣ: ಚಂದ್ರಶೇಖರ್ ಎಂಬಾತ ಈ ಜಮೀನಿಗೆ ಸಂಬಂಧಿಸಿದಂತೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಹರಿಪ್ರಸಾದ್ ರೆಡ್ಡಿಗೆ ಅಪಾರ್ಟ್‍ಮೆಂಟ್ ಕಟ್ಟಲು ಜಮೀನು ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಈ ಜಮೀನಿನ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಈ ಅಕ್ರಮ ದಾಖಲೆಯ ಮೂಲಕ ಅತಿಕ್ರಮಣದ ಬಗ್ಗೆ ನ್ಯಾಯಾಲಯದ ಗಮನವನ್ನು ಸೆಳೆಯಲಾಗಿದೆ.
ನಮ್ಮ ಕುಟಂಬದ ಮೇಲೆ ಚಂದ್ರಶೇಖರ್ ಹಾಗೂ ಹರಿಪ್ರಸಾದ್ ರೆಡ್ಡಿ ಬೆದರಿಕೆಯನ್ನು ಹಾಕುತ್ತಿದ್ದಾರೆ. ನನಗೆ ರೌಡಿಶೀಟರ್‍ಗಳಿಂದ ಅನೇಕ ಬಾರಿ ದೂರವಾಣಿ ಕರೆಗಳು ಬರುತ್ತಿವೆ. ಈ ಬಗ್ಗೆ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಅಲ್ಲಿ ದೂರು ದಾಖಲಿಸಿಕೊಳ್ಳಲಾಗುತ್ತಿಲ್ಲ. ಅಲ್ಲದೆ, ಜಾತಿ ನಿಂದನೆ ಪ್ರಕರಣವನ್ನೂ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಈ ವ್ಯಕ್ತಿಗಳು ತಮ್ಮ ಬೆಂಬಲಿಗರನ್ನು ಬಿಟ್ಟು ನಮ್ಮನ್ನು ಹತ್ಯೆ ಮಾಡುವ ಸಂಚು ರೂಪಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಮುಖ್ಯಮಂತ್ರಿ, ಗೃಹ ಸಚಿವರು, ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಮನವಿಯನ್ನು ನೀಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ದೂರುದಾರ ವಿವೇಕ್ ವಿ. ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಮ್ಮ ಕುಟುಂಬದ ಮೇಲೆ ಯಾವುದೇ ರೀತಿಯ ಹಲ್ಲೆಗಳಾದರೂ ಅದಕ್ಕೆ ಕ್ರಮ ಕೈಗೊಳ್ಳದೇ ಇರುವ ಕೆ.ಆರ್.ಪುರಂ ಪೊಲೀಸ್ ಠಾಣೆಯ ಅಧಿಕಾರಿಗಳೆ ಹೊಣೆ. ಶೀಘ್ರದಲ್ಲಿ ಈ ಬಗ್ಗೆ ದೂರನ್ನು ದಾಖಲಿಸದೇ ಇದ್ದಲ್ಲಿ ಠಾಣೆಯ ಮುಂದೆ ಕುಟುಂಬ ಸಮೇತವಾಗಿ ಧರಣಿ ಕೂರುವುದಾಗಿ ಕಾಂತಮ್ಮ ತಿಳಿಸಿದ್ದಾರೆ.







