ಹತ್ಯೆ ಮೂಲಕ ಪ್ರತಿಭಟನಾನಿರತ ರೈತರನ್ನು ಸುಮ್ಮನಾಗಿಸಲು ಸಾಧ್ಯವಿಲ್ಲ:ವರುಣ್ ಗಾಂಧಿ

ಲಕ್ನೊ: ಲಖಿಂಪುರಖೇರಿಯಲ್ಲಿ ರವಿವಾರ ನಡೆದ ಹಿಂಸಾಚಾರದ ವೀಡಿಯೊ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಪ್ರತಿಭಟನಾನಿರತ ರೈತರನ್ನು ಕೊಲೆ ಮಾಡುವ ಮೂಲಕ ಸುಮ್ಮನಾಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಪಿಲಿಭಿತ್ ಸಂಸದ ವರುಣ್ ಗಾಂಧಿ, ವೀಡಿಯೊದಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಕೊಲೆ ಮೂಲಕ ಪ್ರತಿಭಟನಾನಿರತ ರೈತರನ್ನು ಮೌನವಾಗಿಸಲು ಸಾಧ್ಯವಿಲ್ಲ.ಅಮಾಯಕ ರೈತರು ಚೆಲ್ಲಿದ ರಕ್ತಕ್ಕೆ ಯಾರು ಉತ್ತರದಾಯಿಗಳು ಎನ್ನುವುದು ಗೊತ್ತಾಗಬೇಕು. ರೈತರ ಮನದಲ್ಲಿ ಕ್ರೌರ್ಯ ಹೊಕ್ಕುವ ಮೊದಲು ಅವರಿಗೆ ನ್ಯಾಯ ಒದಗಿಸಬೇಕು ಎಂದು ವರುಣ್ ಪೋಸ್ಟ್ ಮಾಡಿದ್ದಾರೆ.
ವರುಣ್ ಅವರು ತಮ್ಮ ಟ್ವಿಟರ್ ನಲ್ಲಿ ಮಾಹಿತಿಯ ಜೊತೆಗೆ 37 ಸೆಕೆಂಡ್ ಗಳ ವೀಡಿಯೊ ತುಣುಕನ್ನು ಲಗತ್ತಿಸಿದ್ದಾರೆ. ಆ ವೀಡಿಯೊದಲ್ಲಿ ವೇಗವಾಗಿ ಬಂದ ಮಹಿಂದ್ರ ಥಾರ್ ಜೀಪ್ ಜನರ ಮೇಲೆ ಹರಿಯುತ್ತಿರುವ ದೃಶ್ಯವಿದೆ. ಒಂದು ಕಪ್ಪು ಹಾಗೂ ಇನ್ನೊಂದು ಬಿಳಿ ಬಣ್ಣದ ಎರಡು ಎಸ್ ಯುವಿಗಳು ಜೀಪನ್ನು ಹಿಂಬಾಲಿಸುತ್ತಿರುವುದು ದೃಶ್ಯದಲ್ಲಿ ಕಾಣುತ್ತಿದೆ. ಜನರು ಕೂಗುವ ಹಾಗೂ ಅಳುವ ಶಬ್ದವೂ ಕೇಳಿಸುತ್ತಿದೆ.