ವಿಧಾನಸಭೆ ಉಪ ಚುನಾವಣೆಯ ಪ್ರಚಾರಕ್ಕೆ ಸಮಯದ ನಿರ್ಬಂಧ; ಚುನಾವಣಾ ಆಯೋಗ

ಬೆಂಗಳೂರು, ಅ.7: ರಾಜ್ಯದ ಸಿಂಧಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಪ್ರಚಾರದ ಸಮಯವನ್ನು ಕೋವಿಡ್-19 ಕಾರಣದಿಂದ ಸಂಜೆ 7:00 ಗಂಟೆಯಿಂದ ಬೆಳಿಗ್ಗೆ 10:00 ಗಂಟೆಯವರೆಗೆ ನಿರ್ಬಂಧಿಸಿ ಭಾರತ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಅದೇ ರೀತಿಯಲ್ಲಿ ಮತ ಎಣಿಕೆಯ ದಿನ ಮತ ಎಣಿಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ಅಧಿಕಾರಿ/ಸಿಬ್ಬಂಧಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೋವಿಡ್-19 ನಿರೋಧಕ ಎರಡು ಲಸಿಕೆಗಳನ್ನು ಪಡೆದಿರಬೇಕು ಅಥವಾ ಒಂದು ಲಸಿಕೆ ಪಡೆದವರು ಮತ ಎಣಿಕೆ ದಿನದ ಮುಂಚಿನ 72 ಗಂಟೆಯೊಳಗಿನ ಆರ್ ಟಿಪಿಸಿಆರ್ ಪ್ರಮಾಣ ಪತ್ರವನ್ನು ಸಂಬಂಧಿಸಿಧ ಮತ ಎಣಿಕೆ ಕೇಂದ್ರದ ಅಧಿಕಾರಿಗೆ ಸಲ್ಲಿಸಿ ಮತ ಎಣಿಕೆ ಕಾರ್ಯದಲ್ಲಿ ಭಾಗವಯಿಸಬಹುದು ಎಂದು ಆಯೋಗದ ಆದೇಶ ತಿಳಿಸಿದೆ.
ಈ ಕುರಿತು ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಆಯೋಗದ ಆದೇಶಗಳ ಕುರಿತು ತಿಳಿಸಿದರು.
ಪ್ರಸ್ತುತ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಅಭ್ಯರ್ಥಿಗಳ ಚುನಾವಣಾ ಒಟ್ಟು ಖರ್ಚನ್ನು 30,80,000 ರೂ.ಗಳಿಗೆ ಮಿತಿಗೊಳಿಸಿ ಆಯೋಗ ಆದೇಶ ಹೊರಡಿಸಿರುವುದನ್ನು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದರು.
ಚುನಾವಣಾ ಸಮಯದಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.







