'ದತ್ತಪೀಠದಲ್ಲಿ 365 ದಿನಗಳ ಕಾಲವೂ ಪೂಜೆ ನಡೆಯುವಂತೆ ಸರಕಾರ ಕ್ರಮವಹಿಸಲಿದೆ': ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು, ಅ.7: ಗುರು ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೂರು ಮಂದಿ ನೇತೃತ್ವದ ಸಮಿತಿಯನ್ನು ರಚಿಸಿದೆ. ಆದಷ್ಟು ಬೇಗ ದತ್ತಪೀಠ ನಮ್ಮದಾಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರು ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಹಿಂದೂ ಅರ್ಚಕರನ್ನು ನೇಮಿಸಿ ಹಿಂದೂಗಳಿಗೆ ವರ್ಷದ 365 ದಿನಗಳ ಕಾಲವೂ ಪೂಜೆಗೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿದೆ. ದತ್ತಪೀಠ ನಮ್ಮದೇ, ಅಲ್ಲಿಗೆ ಹಿಂದೂ ಅರ್ಚಕರ ನೇಮಕವನ್ನೂ ಸರಕಾರ ಮಾಡಲಿದೆ ಎಂದರು.
ಗಂಗೊಳ್ಳಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಸಾಮರಸ್ಯ ಕಾಪಾಡೋಡು ನಮ್ಮೆಲ್ಲರ ಕರ್ತವ್ಯ, ಒಂದು ಕೋಮಿನ ಜನರು ಇನ್ನೊಂದು ಕೋಮಿನ ಜನರೊಂದಿಗೆ ವ್ಯಾಪಾರ ವಹಿವಾಟು ನಡೆಸಬಾರದು ಎಂದು ಫತ್ವಾ ಹೊರಡಿಸುವುದು ದೇಶ ದ್ರೋಹದ ಕೆಲಸವಾಗಿದೆ. ಮುಖ್ಯಮಂತ್ರಿ ಮತ್ತು ರಾಜ್ಯದ ಗೃಹಸಚಿವರು ಈ ಫತ್ವಾ ಸಂಬಂಧ ತಕ್ಷಣ ಕ್ರಮಕೈಗೊಳ್ಳಬೇಕು. ಇಂತಹ ಘಟನೆಗಳು ಮತ್ತೆಲ್ಲೂ ನಡೆಯದಂತೆ ಕ್ರವಹಿಸಬೇಕು. ಕೋಮು ಸೌಹಾರ್ದಕ್ಕೆ ಧಕ್ಕೆ ತರುವುದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವ ಸಂದರ್ಭಗಳಲ್ಲಿ ಇಂತಹ ಷಡ್ಯಂತ್ರ ಮಾಡಲಾಗುತ್ತಿದೆ. ಇಂತಹ ಹುನ್ನಾರವನ್ನು ದೇಶಾದ್ಯಂತ ನಿರಂತರವಾಗಿ ನಡೆಸಲು ಒಂದು ಶಕ್ತಿ ವ್ಯವಸ್ಥಿತವಾಗಿ ಮಾಡುತ್ತಿದೆ. ಇಂತಹ ಷಡ್ಯಂತ್ರಗಳಿಗೆಲ್ಲ ನಮ್ಮ ಸರಕಾರ ಅವಕಾಶ ನೀಡುವುದಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೆಸ್ಸೆಸ್ ವಿರುದ್ಧ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ಎಚ್.ಡಿ.ಕುಮಾರಸ್ವಾಮಿಯವರು ಜವಬ್ದಾರಿಯುತ ಸ್ಥಾನದಲ್ಲಿ ಕೆಲಸ ಮಾಡಿದವರು. ಯಾವುದೇ ಸಂಘಟನೆ ವಿರುದ್ಧ ಹೇಳಿಕೆ ನೀಡುವಾಗ ಪರಿಶೀಲಿಸಿ ಸತ್ಯಾಂಶ ತಿಳಿದುಕೊಂಡು ಪ್ರತಿಕ್ರಿಯಿಸಬೇಕು. ಆರೆಸ್ಸೆಸ್ ದೇಶಭಕ್ತ, ಸಾಂಸ್ಕøತಿಕ ಸಂಘಟನೆಯಾಗಿದೆ. ಈ ಸಂಘಟನೆ ನಿರಂತರವಾಗಿ ಜನರ ಸೇವೆ ಮಾಡಿಕೊಂಡು ಬರುತ್ತಿದೆ. ಆರೆಸ್ಸೆಸ್ ಮೇಲೆ ಯಾವುದೇ ದೇಶದ್ರೋಹದ ಆರೋಪವಿಲ್ಲ, ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಉತ್ತರಪ್ರದೇಶದಲ್ಲಿ ರೈತರ ಮೇಲೆ ವಾಹನ ಹರಿಸಿ ಹತ್ಯೆ ಮಾಡಿದ ಘಟನೆಯ ಹಿಂದೆ ಸರಕಾರಕ್ಕೆ ಕೆಟ್ಟ ಹೆಸರು ತರಲು ವ್ಯವಸ್ಥಿತಿ ಷಡ್ಯಂತ್ರ ನಡೆದಿರುವ ಶಂಕೆ ಇದೆ. ಈ ಪ್ರಕರಣ ಸಂಬಂಧ ಸಮಗ್ರ ತನಿಖೆಯಾಗಬೇಕು. ಈ ಕಾರಣಕ್ಕೆ ಅಲ್ಲಿನ ಸರಕಾರ ಉನ್ನತ ಮಟ್ಟದ ತನಿಖೆಗಾಗಿ ಈಗಾಗಲೇ ಸಮಿತಿಯನ್ನು ನೇಮಿಸಲಾಗಿದೆ ಎಂದರು.







