ಬೆಂಗಳೂರು; ತಾಯಿ, ಮಗಳಿಗೆ ಚಾಕು ಇರಿದು ಹತ್ಯೆ: ಪರಿಚಿತನಿಂದಲೇ ಕೃತ್ಯ ಶಂಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.7: ದುಷ್ಕರ್ಮಿಯೋರ್ವ ಚಾಕುವಿನಿಂದ ಇರಿದು ತಾಯಿ ಹಾಗೂ ಮಗುವನ್ನು ಹತ್ಯೆಗೈದ ಘಟನೆ ಬೇಗೂರಿನ ಚೌಡೇಶ್ವರಿ ಲೇಔಟ್ನಲ್ಲಿ ನಡೆದಿದೆ.
ಮೃತರನ್ನು ಚಂದ್ರಕಲಾ(40) ಮತ್ತವರ ಪುತ್ರಿ ರಾತನ್ಯ(4) ಎಂದು ಗುರುತಿಸಲಾಗಿದೆ. ಮನೆಯಿಂದ ಬುಧವಾರ ಬೆಳಗ್ಗೆ ಪತಿ ಕೆಲಸಕ್ಕೆ ಹೋದ ಬಳಿಕ ದುಷ್ಕರ್ಮಿ ಮನೆಗೆ ನುಗ್ಗಿ ಕೊಲೆ ಮಾಡಿದ್ದು ಎನ್ನಲಾಗಿದ್ದು, ಮನೆಯಲ್ಲಿನ ಚಿನ್ನಾಭರಣ ಬೆಲೆ ಬಾಳುವ ವಸ್ತುಗಳು ಕಳವು ಮಾಡಿಲ್ಲ. ಹೀಗಾಗಿ, ಪರಿಚಯಸ್ಥರೇ ವೈಯಕ್ತಿಕ ಇಲ್ಲವೇ ಬೇರೆ ಕಾರಣಕ್ಕೆ ಕೊಲೆ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಿ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಸಂಬಂಧಿಕರು ಚಂದ್ರಕಲಾ ಅವರ ಚೌಡೇಶ್ವರಿ ಲೇಔಟ್ನ ಮನೆಗೆ ಸಂಜೆ ಬಂದು ನೋಡಿದಾಗ ಹಾಲ್ನಲ್ಲಿ ತಾಯಿ ಹಾಗೂ ಕೊಠಡಿಯಲ್ಲಿ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿತ್ತು. ಚಂದ್ರಕಲಾ ಅವರ ಪತಿ ಚೆನ್ನವೀರಸ್ವಾಮಿ ಚಿತ್ರದುರ್ಗದ ಮೂಲದವರಾಗಿದ್ದಾರೆ, ಅಲ್ಲಿಂದ ಬಂದು ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಅವರು ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ಪತ್ನಿ ಜೊತೆ ವಾಸವಿದ್ದರು.
ಕೊಲೆಯಾದ ಚಂದ್ರಕಲಾ ಆಯುರ್ವೇದಿಕ್ ವಸ್ತುಗಳ ಆನ್ಲೈನ್ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಮತ್ತೊಂದು ಮಗುವನ್ನು ಹಾಸ್ಟೆಲ್ನಲ್ಲಿ ಓದಿಸುತ್ತಿದ್ದರು. ಈ ಮೊಕದ್ದಮೆ ದಾಖಲಿಸಿಕೊಂಡಿರುವ ಬೇಗೂರು ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.







