ಮ್ಯಾನ್ಯುವಲ್ ಸ್ಕ್ಯಾವೆಂಜರ್ ಗಳಿಗೆ ಸೌಲಭ್ಯ ವಂಚನೆ ಆರೋಪ; ಬಿಬಿಎಂಪಿ ವಿರುದ್ಧ ಸಫಾಯಿ ಕರ್ಮಚಾರಿಗಳಿಂದ ಪ್ರತಿಭಟನೆ

ಬೆಂಗಳೂರು, ಅ.7: ದೇಶದ ನೈಜ ಸ್ವಚ್ಛತಾ ರಾಯಭಾರಿಗಳಾದ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಗಳಿಗೆ ನ್ಯಾಯಬದ್ಧವಾಗಿ ಸಲ್ಲಬೇಕಾದ ಸೌಲಭ್ಯಗಳನ್ನು ದೊರಕಿಸಲು ಅನಗತ್ಯ ಸಬೂಬುಗಳನ್ನು ಹೇಳಿ, ವಿಳಂಬ ಧೋರಣೆ ಅನುಸರಿಸುತ್ತಿರುವ ಬಿಬಿಎಂಪಿ ಅಧಿಕಾರಿಗಳ ಧೋರಣೆ ವಿರುದ್ಧ ನಗರದ ಫ್ರೀಡಂ ಪಾರ್ಕ್‍ನಲ್ಲಿ ಗುರುವಾರ ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ದಿ ಸಂಘದ ಪ್ರತಿನಿಧಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಮುಂದಿನ 15 ದಿನಗಳಲ್ಲಿ ಈಗಾಗಲೇ ಗುರುತಿಸಿರುವ ಸಫಾಯಿ ಕರ್ಮಚಾರಿಗಳ ಸಮಗ್ರ ಮಾಹಿತಿಯನ್ನು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮಕ್ಕೆ ಕಳುಹಿಸದಿದ್ದರೆ ನ್ಯಾಯ ದೇವತೆಯಾದ ಹೈಕೋರ್ಟ್ ಮುಂಭಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರತಿಭಟನಾನಿರತರು ಬೆದರಿಕೆ ಹಾಕಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ಅತೀವ ನಿರ್ಲಕ್ಷ್ಯದಿಂದ ಶೋಷಿತ ಸಮುದಾಯ ತೊಂದರೆ ಎದುರಿಸುವಂತಾಗಿದೆ. ಮ್ಯಾನ್ಯುವೆಲ್ ಸ್ಕ್ಯಾವೆಂಜರ್‍ಗಳಿಗೆ ಅನುದಾನ, ಗುರುತಿನ ಚೀಟಿ ಮತ್ತಿತರ ಸೌಲಭ್ಯ ಕಲ್ಪಿಸುವ ಬೇಡಿಕೆ ಈಡೇರುತ್ತಿಲ್ಲ. ಕೇಂದ್ರ ಸರಕಾರಕ್ಕೆ ಸೌಲಭ್ಯ ವಂಚಿತರ ಪಟ್ಟಿ ಕಳುಹಿಸದೇ ಬಿಬಿಎಂಪಿ ಅನ್ಯಾಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಜಿ.ಎನ್.ನಾಗೇಂದ್ರ, 2013ರ ಕಾಯ್ದೆಯಂತೆ ಸುಪ್ರೀಂ ಕೋರ್ಟ್, ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯ ಹೈಕೋರ್ಟ್ ಬೆಂಗಳೂರಿನಲ್ಲಿರುವ ಮ್ಯಾನುವೆಲ್ ಸ್ಕ್ಯಾವಂಜರ್‍ಗಳಿಗೆ ಸೌಲಭ್ಯ ನೀಡಬೇಕೆಂದು ಸೂಚನೆ ನೀಡಿದ್ದು, ಇದಕ್ಕೆ ಬಿಬಿಎಂಪಿ ಒಪ್ಪಿಗೆ ಸೂಚಿಸಿದೆ. ಆದರೆ ಸೌಲಭ್ಯಕ್ಕಾಗಿ ಕಡತಗಳನ್ನು ದಿಲ್ಲಿಯ ಎನ್.ಎಸ್.ಕೆ.ಡಿ.ಸಿ. ಕಚೇರಿಗೆ ಕಳುಹಿಸಿಲ್ಲ ಎಂದು ಕಿಡಿಗಾರಿದರು.
ಅಧಿಕಾರಿಗಳು ಅಸಮರ್ಪಕ ಮಾಹಿತಿ ನೀಡಿರುವುದರಿಂದ, ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ನಮ್ಮ ಸಮುದಾಯಕ್ಕೆ ಸೌಲಭ್ಯ ಎನ್ನುವುದು ಮರೀಚಿಕೆಯಾಗಿದೆ. ಬಿಬಿಎಂಪಿ ಅಧಿಕಾರಿಗಳು ಕಡತ ಕಾಣೆಯಾಗಿದ್ದು, ಮತ್ತೊಮ್ಮೆ ಸಲ್ಲಿಸಿ ಎಂದು ಸಬೂಬುಗಳನ್ನು ಹೇಳಿ ನಮ್ಮ ವಿಚಾರದಲ್ಲಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದು ಅವರು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಏಳು ವರ್ಷಗಳ ಹಿಂದೆ ಅಕ್ಟೋಬರ್ 2 ರಂದು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ್ದು, ಇದೀಗ ಎರಡನೇ ಹಂತದ ಸ್ವಚ್ಛತಾ ಅಭಿಯಾನಕ್ಕೂ ಚಾಲನೆ ನೀಡಿದ್ದಾರೆ. ಆದರೆ ಹಲವಾರು ರಾಜ್ಯಗಳು, ನಗರಗಳು ಬಯಲು ಬಹಿರ್ದೆಸೆ ಮುಕ್ತವಾಗಿವೆ. ಈ ಯಶಸ್ಸಿನಲ್ಲಿ ಅಭಿಯಾನದ ರೂವಾರಿಗಳಾದ ನಮ್ಮ ಪಾತ್ರ ಇದೆ ಎಂದು ಅವರು ಹೇಳಿದರು.
ಆದರೆ ಬೆಂಗಳೂರಿನ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಗಳ ಪರಿಸ್ಥಿತಿ ಮಾತ್ರ ಇನ್ನೂ ಶೋಚನೀಯವಾಗಿಯೇ ಇದೆ. ಬಿಬಿಎಂಪಿ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಸ್ವಚ್ಛ ಭಾರತದ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನಾಗೇಂದ್ರ ಆರೋಪಿಸಿದರು.
2018-19 ರಲ್ಲಿ 1424 ಜನರಿಗೆ 40,000 ರೂ.ಅನುದಾನ ಮತ್ತು ಗುರುತಿನ ಚೀಟಿ ನೀಡುವ ಜತೆಗೆ ಇವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಪಡೆಯಲು ರಾಷ್ಟ್ರೀಯ ಆಯೋಗಕ್ಕೆ ಸರಿಯಾದ ಮಾಹಿತಿ ಸಲ್ಲಿಸಬೇಕು. ಆದರೆ, ರಾಜ್ಯ ಬಿಜೆಪಿ ಸರಕಾರ ಮತ್ತು ಬಿಬಿಎಂಪಿ ವೈಫಲ್ಯದಿಂದ ಬೆಂಗಳೂರಿನಲ್ಲಿ ಮ್ಯಾನ್ಯುವೆಲ್ ಸ್ಕ್ಯಾವೆಂಜರ್‍ಗಳಿಗೆ ತುಂಬಾ ಅನ್ಯಾಯ ಆಗುತ್ತಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕುವ ಜತೆಗೆ ಹೈಕೋರ್ಟ್ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ನಾಗೇಂದ್ರ ಹೇಳಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಗಂಗಾಧರ್, ಸಂಧ್ಯಾ, ಸಿಂಹಾದ್ರಿ, ನಾರಾಯಣಸ್ವಾಮಿ, ಬಾಬುಲಾಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
.jpg)







