'ಪತ್ರಕರ್ತನನ್ನು ರೈತರು ಕೊಂದಿದ್ದಾರೆʼ ಎಂದು ಹೇಳುವಂತೆ ಮಾಧ್ಯಮಗಳಿಂದ ಒತ್ತಡ: ಸಹೋದರನ ಆರೋಪ

Photo: Twitter
ಲಕ್ನೋ: ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿದ ಸಂದರ್ಭ ಉಂಟಾಗಿದ್ದ ಹಿಂಸಾಚಾರದಲ್ಲಿ ಸ್ಥಳೀಯ ಪತ್ರಕರ್ತನೋರ್ವ ಮೃತಪಟ್ಟಿದ್ದ. ಕೇಂದ್ರ ಸಚಿವ ಅಜಯ್ ಕುಮಾರ್ ನ ಪುತ್ರ ಈ ಕೃತ್ಯವೆಸಗಿದ್ದಾನೆಂದು ಸಂಬಂಧಿಕರು ಆರೋಪಿಸಿದ್ದರು. ಆದರೆ ಪತ್ರಕರ್ತನನ್ನು ರೈತರು ಕೊಂದಿದ್ದಾರೆ ಎಂದು ಹೇಳುವಂತೆ ಮಾಧ್ಯಮಗಳು ನಮ್ಮ ಮೇಲೆ ಒತ್ತಡ ಹಾಕುತ್ತಿವೆ ಎಂದು ಪತ್ರಕರ್ತ ರಮಣ್ ಕಶ್ಯಪ್ ರ ಸಂಬಂಧ ಹೇಳಿಕೆ ನೀಡಿದ್ದಾಗಿ Timesofindia.com ವರದಿ ಮಾಡಿದೆ.
"ನಾನು ಮತ್ತು ನನ್ನ ತಂದೆ ಎಲ್ಲರಿಗೂ ಒಂದೇ ಹೇಳಿಕೆ ನೀಡಿದ್ದೆವು. ಕೇಂದ್ರ ಸಚಿವರ ಪುತ್ರ ಆತನ ಮೇಲೆ ಕಾರು ಹರಿಸಿ ಬಳಿಕ ಗುಂಡಿಕ್ಕಿ ಕೊಂದಿದ್ದಾರೆಂದು ಈಗಾಗಲೇ ತಿಳಿಸಿದ್ದೇವೆ. ಆದರೆ ಹಲವಾರು ಪತ್ರಕರ್ತರು ಅಡ್ಡ ಪ್ರಶ್ನೆಗಳನ್ನು ಕೇಳುತ್ತಾ, ರೈತರೇ ಆತನನ್ನು ಥಳಿಸಿ ಕೊಂದಿದ್ದಾರೆ ಎಂದು ಹೇಳುತ್ತಿದ್ದಾರೆ, ನಮಗೂ ಒತ್ತಡ ಹಾಕುತ್ತಿದ್ದಾರೆ. ಆದರೆ ಹಾಗೆ ನಡೆಯಲು ಸಾಧ್ಯವೇ ಇಲ್ಲ" ಎಂದು ಅವರ ಸಹೋದರ ಪವನ್ ತಿಳಿಸಿದ್ದಾರೆ.
ರೈತ ನಾಯಕ ರಾಕೇಶ್ ಟಿಕಾಯತ್ ನೀಡಿದ್ದ ಹೇಳಿಕೆಯೊಂದರಲ್ಲಿ, ಮೃತಪಟ್ಟಿರುವ ಪತ್ರಕರ್ತನನ್ನೂ ನಮ್ಮ ರೈತ ಹುತಾತ್ಮರ ಸಾಲಿಗೆ ಸೇರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. "ನನ್ನ ಸಹೋದರ ಪತ್ರಕರ್ತ. ನಮ್ಮದು ರೈತ ಕುಟುಂಬ. ಟಿಕಾಯತ್ ಹೇಳಿದ್ದು ಸರಿಯಾಗಿದೆ. ನಮಗಿನ್ನೂ ಪೋಸ್ಟ್ ಮಾರ್ಟಮ್ ವರದಿ ಸಿಕ್ಕಿಲ್ಲ. ಇನ್ನೊಂದು ಎಫ್ಐಆರ್ ಗೆ ನಮ್ಮ ದೂರನ್ನು ಲಗತ್ತಿಸಬೇಕಾಗಿದೆ ಎಂದು ಹೇಳಿದ್ದಾರೆ." ಎಂದು ಅವರು ಹೇಳಿಕೆ ನೀಡಿದ್ದಾರೆ.





