ಬಾಲಬ್ರೂಯಿ ಅತಿಥಿ ಗೃಹದಲ್ಲಿ 'ಕಾನ್‍ಸ್ಟಿಟ್ಯೂಷನ್ ಕ್ಲಬ್' ನಿರ್ಮಾಣಕ್ಕೆ ಹೈಕೋರ್ಟ್ ತಡೆ

ಬೆಂಗಳೂರು, ಅ.7: ಹೊಸದಿಲ್ಲಿ ಮಾದರಿಯಲ್ಲಿ ಬಾಲಬ್ರೂಯಿ ಅತಿಥಿ ಗೃಹದಲ್ಲಿ ಕಾನ್‍ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣ ಮಾಡಲು ರಾಜ್ಯ ಸರಕಾರ ಕೈಗೊಂಡಿದ್ದ ನಿರ್ಣಯಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ಕುರಿತು ಮಧ್ಯಂತರ ಆದೇಶ ನೀಡಿರುವ ಕರ್ನಾಟಕ ಹೈಕೋರ್ಟ್ ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶಿಸಿದೆ. ಬಾಲಬ್ರೂಯಿ ಆವರಣದ ಮರಗಳ ಸರ್ವೇ ನಡೆಸಿ ವರದಿ ಸಲ್ಲಿಸಬೇಕು. ಕೋರ್ಟ್ ಅನುಮತಿಯಿಲ್ಲದೇ ಮರಗಳನ್ನು ಕಡಿಯಬಾರದು ಎಂದು ಹೈಕೋರ್ಟ್ ವಿಭಾಗೀಯ ಪೀಠವು ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ವಿಚಾರಣೆಯನ್ನು ನ್ಯಾಯಾಲಯವು ನ.19ಕ್ಕೆ ಮುಂದೂಡಿದೆ.
ಪಾರಂಪರಿಕ ಮೌಲ್ಯ ಹೊಂದಿರುವ ಬಾಲಬ್ರೂಯಿ ಕಟ್ಟಡದಲ್ಲಿ ಕಾನ್‍ಸ್ಟಿಟ್ಯೂಷನ್ ಕ್ಲಬ್ ನಿರ್ಮಿಸುವ ಸರಕಾರದ ಪ್ರಸ್ತಾವಕ್ಕೆ ಈ ಹಿಂದೆ ಪರಿಸರವಾದಿಗಳು ಮತ್ತು ನಗರದ ಇತಿಹಾಸ ತಜ್ಞರಿಂದ ವಿರೋಧ ವ್ಯಕ್ತವಾಗಿತ್ತು. ಬೆಂಗಳೂರಿನ ಪರಂಪರೆ ಸಾರುವ ಇಂಥ ತಾಣಗಳನ್ನು ಕಾಪಾಡಬೇಕು. ಒಮ್ಮೆ ಇಂಥ ಕಟ್ಟಡಗಳ ಮೂಲ ಸ್ವರೂಪ ನಾಶಪಡಿಸಿದರೆ ಮತ್ತೆ ರೂಪಿಸುವುದು ಅಸಾಧ್ಯ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದರು.
14 ಎಕರೆ ಪ್ರದೇಶದಲ್ಲಿ 1850ರಲ್ಲಿ ಬಾಲಬ್ರೂಯಿ ಕಟ್ಟಡವನ್ನು ನಿರ್ಮಿಸಲಾಗಿತ್ತು. ಮೈಸೂರು ರಾಜ್ಯದಲ್ಲಿ ಸುದೀರ್ಘ ಕಾಲ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಮಾರ್ಕ್ ಕಬ್ಬನ್ ತಮ್ಮ ಐರಿಶ್ ಸಮುದ್ರದ ದ್ವೀಪದ ಊರಿನಲ್ಲಿರುವ ರಚನೆಯನ್ನು ನಿರ್ಮಿಸಲು ಉದ್ದೇಶಿಸಿದ್ದರು. ಇಲ್ಲಿ 100 ವರ್ಷಗಳಿಗೂ ಹಳೆಯ ಸುಮಾರು 150 ವಿವಿಧ ಮರಗಳಿವೆ ಎಂದು ಪರಿಸರವಾದಿಗಳು ಹೇಳುತ್ತಾರೆ.







