ಬೆಂಗಳೂರು; ವಜಾಗೊಂಡಿದ್ದ ಬಿಎಂಟಿಸಿ ಚಾಲಕ ಆತ್ಮಹತ್ಯೆಗೆ ಯತ್ನ
ಬೆಂಗಳೂರು, ಅ.7: ಮುಷ್ಕರದ ಸಂದರ್ಭದಲ್ಲಿ ಸೇವೆಯಿಂದ ವಜಾಗೊಂಡಿದ್ದ ಬಿಎಂಟಿಸಿ ನೌಕರರೊಬ್ಬರು ಇಂದಿರಾನಗರ ಡಿಪೆÇೀ 6ರಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಬಿಎಂಟಿಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಕೇಶವ್ ಎಂಬುವರೇ ಆತ್ಮಹತ್ಯೆಗೆ ಯತ್ನಿಸಿದ್ದು, ಇವರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಹಳೆ ಬೈಯ್ಯಪ್ಪನಹಳ್ಳಿಯಲ್ಲಿ ವಾಸವಾಗಿರುವ ಕೇಶವನ್ ಅವರು ಕಳೆದ ಎಪ್ರಿಲ್‍ನಲ್ಲಿ ನಡೆದ ಮುಷ್ಕರದಲ್ಲಿ ಪಾಲ್ಗೊಂಡಿದ್ದರು, ಆ ಸಂದರ್ಭದಲ್ಲಿ ಇವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿದ್ದ ಕೇಶವನ್ ಅವರು, ಅ.7ರ ಬೆಳಗ್ಗೆ ಡಿಪೋ 6ರ ಬಳಿ ಬಂದು ಮ್ಯಾನೇಜರ್ ಅವರಿಗೆ ವಿಷ ಸೇವಿಸಿರುವುದಾಗಿ ಹೇಳಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೌಕರರ ಜೀವ ಉಳಿಸಿ: ಆಸ್ಪತ್ರೆಯಿಂದ ಮಾತನಾಡಿರುವ ಕೇಶವನ್, ಸಾರಿಗೆ ಸಂಸ್ಥೆಯಲ್ಲಿ ಡಿಪೋ 6ರಲ್ಲಿ ನಾನು ಚಾಲಕನಾಗಿದ್ದೇನೆ. ನನ್ನ ಜೊತೆಗೆ 26 ಮಂದಿ ಚಾಲಕರು ನನ್ನ ಜೊತೆಗೆ ವಜಾ ಆಗಿದ್ದಾರೆ. ನಾವು ಯಾರೂ ತಪ್ಪು ಮಾಡಿಲ್ಲ. ನಾವೆಲ್ಲ ಚಾಲಕರೂ ಕಷ್ಟದಲ್ಲಿದ್ದೇವೆ. ಅವರ ನೋವನ್ನೂ ನೆನೆಸಿಕೊಂಡು ಅದನ್ನು ತಡೆಯಲಾಗದೆ ಡಿಪೋ ಮುಂದೆಯೇ ವಿಷ ಕುಡಿದಿದ್ದೇನೆ. ನನ್ನ ಜೀವ ಹೋದರೂ ಪರವಾಗಿಲ್ಲ, ಇರುವವರನ್ನಾದರೂ ಉಳಿಸಿಕೊಳ್ಳಿ. ನಾವು ನ್ಯಾಯವಾದ ಬೇಡಿಕೆ ಕೇಳಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ, ಉಳಿದ ಎರಡು ಸಾವಿರ ನೌಕರರ ಜೀವ ಉಳಿಸಿ, ಇನ್ಮುಂದೆ ಹೀಗೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.







