ಯುವಕನಿಗೆ ದುಷ್ಕರ್ಮಿಗಳಿಂದ ಹಲ್ಲೆ: ಪ್ರತೀಕಾರಕ್ಕೆ ಮುಂದಾದ ಆರು ಮಂದಿಯ ತಂಡ
ಮಂಗಳೂರು, ಅ.7: ನಗರದ ಹೊರವಲಯದ ಮೂಡುಶೆಡ್ಡೆಯಲ್ಲಿ ಬುಧವಾರ ತಡರಾತ್ರಿ ಯುವಕನೋರ್ವನಿಗೆ ನಡೆದ ಹಲ್ಲೆಯ ಪ್ರತೀಕಾರಕ್ಕಾಗಿ ರೌಡಿಶೀಟರ್‌ಗಳ ತಂಡ ತಲವಾರು ತೋರಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾದ ಘಟನೆ ಗುರುವಾರ ಸಂಜೆ ನಡೆದಿದೆ.
ರಿಝ್ವಾನ್ ನೇತೃತ್ವದ ಮುಸ್ತಫ, ನಿಝಾಮ್, ಶಾರೂಕ್ ಒಳಗೊಂಡ ತಂಡವು ಕೊಲೆ ಬೆದರಿಕೆವೊಡ್ಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ವಿವರ: ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ಮೂಡುಶೆಡ್ಡೆಯ ಪಿಲಿಕುಳ ನಿಸರ್ಗಧಾಮ ಸಮೀಪ ಮುಹಮ್ಮದ್ ಅಶ್ಪರ್ ಎಂಬಾತ ಅಂಗಡಿಯೊಂದರ ಬಳಿ ನಿಂತುಕೊಂಡಿದ್ದ. ಈ ವೇಳೆ ನಾಲ್ವರು ಬೈಕ್‌ಗಳಲ್ಲಿ ತೆರಳುತ್ತಿದ್ದರು. ಅವರು ಹಾರ್ನ್ ಹಾಕಿದ್ದನ್ನು ಅಶ್ಪರ್ ಪ್ರಶ್ನಿಸಿದ್ದ ಎನ್ನಲಾಗಿದ್ದು, ಕೆಲಹೊತ್ತಿನ ಬಳಿಕ ಆಟೊರಿಕ್ಷಾದಲ್ಲಿ ವಾಪಸಾದ ನಾಲ್ವರಿದ್ದ ತಂಡ ಅಶ್ಪರ್‌ಗೆ ಹಲ್ಲೆ ನಡೆಸಿ ಬಳಿಕ ಅವರು ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದೆ.
ತಲವಾರು ತೋರಿಸಿ ಕೊಲೆ ಬೆದರಿಕೆ: ಇಂದು ಸಂಜೆಯ ವೇಳೆ ಅದೇ ಮೂಡುಶೆಡ್ಡೆಯಲ್ಲಿ ಬುಧವಾರ ರಾತ್ರಿ ಮುಹಮ್ಮದ್ ಅಶ್ಪರ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಿಗೆ ರಿಝ್ವಾನ್ ನೇತೃತ್ವದ ತಂಡ ತಲವಾರು ತೋರಿಸಿ ಕೊಲೆ ಬೆದರಿಕೆ ಹಾಕಿದೆ ಎಂದು ತಿಳಿದುಬಂದಿದೆ.
ಈ ಎರಡೂ ಘಟನೆಗಳಿಗೆ ಸಂಬಂಧಪಟ್ಟಂತೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿಲ್ಲ.





