ಮಸೀದಿಗಳು ಕೇವಲ ಆರಾಧನಾ ಕೇಂದ್ರವಾಗದೇ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಕೇಂದ್ರವಾಗಬೇಕು : ಯಾಸೀನ್ ಮಲ್ಪೆ

ಕುಂದಾಪುರ : ದೇಶದ ಪ್ರಸಕ್ತ ವಿದ್ಯಮಾನದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನಿಲುವು ಮತ್ತು ಯೋಜನೆಗಳ ಬಗ್ಗೆ ವಿಚಾರ ವಿನಿಮಯ ಮಾಡಲು ಮತ್ತು ಒಕ್ಕೂಟದ ಯೋಜನೆಗಳನ್ನು ಪರಿಚಯಿಸಲು ತಾಲೂಕು ಮಟ್ಟದ ಗಣ್ಯರ ಸಮಾವೇಶವು ಮಾವಿನಕಟ್ಟೆಯ ಸಮುದಾಯ ಭವನದಲ್ಲಿ ಗುರುವಾರ ನಡೆಯಿತು.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಯಾಸೀನ್ ಮಲ್ಪೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ "ಇಂದು ನಮ್ಮ ಮಸೀದಿಗಳು ಕೇವಲ ಆರಾಧನೆ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗಿದೆ. ಆದರೆ ನಮ್ಮ ಮಸೀದಿಗಳು ಏಕತೆಯ ಕೇಂದ್ರ, ಸಮುದಾಯದ ಅಭಿವೃದ್ಧಿ ಕೇಂದ್ರ ಮತ್ತು ಸಾಮಾಜಿಕ ಸಂಬಂಧವನ್ನು ಬಲಪಡಿಸುವ ಕೇಂದ್ರಗಳನ್ನಾಗಿ ಮಾರ್ಪಡಿಸಬೇಕು" ಎಂದು ಹೇಳಿದರು.
ಒಕ್ಕೂಟದ ಮಾಜಿ ಜಿಲ್ಲಾಧ್ಯಕ್ಷರಾದ ಎಂ.ಪಿ. ಮೊಹಿದಿನಬ್ಬ ವಕ್ಫ್ ಕಾನೂನಿನ ಬಗ್ಗೆ ಮಾಹಿತಿ ನೀಡುತ್ತಾ "ವಕ್ಫ್ ಬೋರ್ಡ್ ನ ಬಗ್ಗೆ ಸಮುದಾಯದಲ್ಲಿ ಭಿನ್ನಾಭಿಪ್ರಾಯಗಳಿವೆ. ವಕ್ಫ್ ಬೋರ್ಡ್ ಸಮುದಾಯದ ಒಂದು ಸಂಸ್ಥೆಯಾಗಿದೆ, ಅದರ ಬಗ್ಗೆ ತಪ್ಪು ಕಲ್ಪನೆ ಮಾಡುವುದು ಬೇಡ, ಆ ಸಂಸ್ಥೆಯಿಂದ ಸಿಗುವ ಸೌಲಭ್ಯಗಳಿಂದ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು." ಎಂದು ಹೇಳಿದರು.
ಎ.ಪಿ.ಸಿ.ಆರ್ ಉಡುಪಿ ಜಿಲ್ಲಾಧ್ಯಕ್ಷರಾದ ಹುಸೇನ್ ಕೋಡಿಬೇಂಗ್ರೆ ಮಾತನಾಡುತ್ತಾ "ಈ ದೇಶದಲ್ಲಿ ನಮಗೆ ನಮ್ಮ ಸಂವಿಧಾನವು ಧಾರ್ಮಿಕ, ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ನೀಡಿದೆ, ಆದರೆ ಇತ್ತೀಚಿನ ಕಾಲದಲ್ಲಿ ಕೆಲವು ಶಕ್ತಿಗಳು ಸಂವಿಧಾನದ ಆಶಯಕ್ಕೆ ತದ್ವಿರುದ್ಧವಾಗಿ ಅಪಪ್ರಚಾರದಿಂದ ಕೋಮುಗಲಭೆಗಳು ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ. ಆದ್ದರಿಂದ ನಾವೆಲ್ಲರೂ ಜಾಗರೂಕರಾಗಿರಬೇಕು" ಎಂದು ಹೇಳಿದರು.
ಸಮಾವೇಶವನ್ನು ಹಾಜಿ ಮುಹಮ್ಮದ್ ನೇರಳಕಟ್ಟೆಯವರು ಸಸಿ ನೆಡುವ ಮೂಲಕ ಉದ್ಘಾಟಿಸಿದರು. ಅಲ್ ಬದ್ರಿಯಾ ಜುಮಾ ಮಸೀದಿ, ಮಾವಿನಕಟ್ಟೆಯ ಖತೀಬ್ ಮೌಲಾನಾ ಇಸ್ಮಾಯಿಲ್ ಮದನಿ ಕುರ್ ಆನ್ ಪಠಣದೊಂದಿಗೆ ಸಮಾವೇಶ ಆರಂಭಗೊಂಡಿತು. ತಾಲೂಕು ಅಧ್ಯಕ್ಷರಾದ ಮುಹಮ್ಮದ್ ರಫೀಕ್ ಗಂಗೊಳ್ಳಿ ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾಧ್ಯಕ್ಷರಾದ ಇಬ್ರಾಹಿಮ್ ಸಾಹೇಬ್ ಕೋಟ ವಿಷಯ ಪ್ರಸ್ತಾಪಿಸಿದರು. ತಾಲೂಕು ಕಾರ್ಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಶಾದಿ ವಂದಿಸಿದರು. ಎಸ್. ಮುನೀರ್ ಅಹ್ಮದ್ ಕಂಡ್ಲೂರು ನಿರೂಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎ. ಮೌಲಾ ಉಡುಪಿ, ಜಿಲ್ಲಾ ಹಿರಿಯ ಉಪಾಧ್ಯಕ್ಷರಾದ ಖತೀಬ್ ಅಬ್ದುಲ್ ರಶೀದ್ ಮಲ್ಪೆ, ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ ಮುನಾಫ್ ಕಂಡ್ಲೂರು, ಜಿಲ್ಲಾ ಕೋಶಾಧಿಕಾರಿ ಶಾಬಾನ್ ಹಂಗಳೂರು, ಬೈಂದೂರು ತಾಲೂಕು ಅಧ್ಯಕ್ಷರಾದ ಹಸನ್ ಮಾವಡ್, ಒಕ್ಕೂಟದ ಜಿಲ್ಲಾ ಹಾಗೂ ತಾಲೂಕು ಸಮಿತಿ ಸದಸ್ಯರು, ಮಸೀದಿಗಳ ಮತ್ತು ಸಂಘ ಸಂಸ್ಥೆಗಳ ಹೂಣೆಗಾರರು, ಸಮಾಜ ಸೇವಕರು ಹಾಗೂ ಇತರರು ಉಪಸ್ಥಿತರಿದ್ದರು.








