ಲಖಿಂಪುರ ಖೇರಿ ಹಿಂಸಾಚಾರ ಘಟನೆಯ ತನಿಖೆಯನ್ನು ಸುಪ್ರೀಂ, ಹೈಕೋರ್ಟ್ ನ ಹಾಲಿ ನ್ಯಾಯಾಧೀಶರು ನಡೆಸಲಿ: ಪ್ರಿಯಾಂಕಾ ಗಾಂಧಿ

ಲಕ್ನೋ, ಅ. 7: ಲಖಿಂಪುರ ಖೇರಿ ಹಿಂಸಾಚಾರ ಘಟನೆಯನ್ನು ಸುಪ್ರೀಂ ಕೋರ್ಟ್ ಅಥವಾ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಗಳು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಗುರುವಾರ ಆಗ್ರಹಿಸಿದ್ದಾರೆ.
ಪಾರದರ್ಶಕ ತನಿಖೆಯ ಖಾತರಿ ನೀಡಲು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದ 8 ಮಂದಿಯಲ್ಲಿ ಮೂವರ ಕುಟುಂಬವನ್ನು ಬುಧವಾರ ಭೇಟಿಯಾಗಿರುವ ಪ್ರಿಯಾಂಕಾ ಗಾಂಧಿ, ‘‘ಘಟನೆಯ ತನಿಖೆಯನ್ನು ಸುಪ್ರೀಂ ಕೋರ್ಟ್ ಅಥವಾ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರು ನಡೆಸಬೇಕು. ನಿವೃತ್ತ ನ್ಯಾಯಾಧೀಶರು ನಡೆಸಬಾರದು ಎಂಬುದು ನನ್ನ ಹಾಗೂ ಕುಟುಂಬದ ನಿಲುವು’’ ಎಂದಿದ್ದಾರೆ.
8 ಮಂದಿ ಸಾವನ್ನಪ್ಪಲು ಕಾರಣವಾದ ರೈತರ ಪ್ರತಿಭಟನಾ ರ್ಯಾಲಿ ಸಂದರ್ಭ ಸಂಭವಿಸಿದ ಹಿಂಸಾಚಾರದ ಕುರಿತು ತನಿಖೆ ನಡೆಸಲು ಉತ್ತರಪ್ರದೇಶ ಸರಕಾರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪ್ರದೀಪ್ ಕುಮಾರ್ ಶ್ರೀವಾತ್ಸವ ಅವರ ಏಕ ಸದಸ್ಯ ಆಯೋಗವನ್ನು ರೂಪಿಸಿದೆ. ಬಹ್ರೈಯಾಕ್ನಿಂದ ತೆರಳುವ ಮುನ್ನ ಪ್ರಿಯಾಂಕಾ ಗಾಂಧಿ, ‘‘ಇದುವರೆಗೆ ತನಿಖೆ ಆರಂಭವಾಗದೇ ಇರುವುದರಿಂದ, ಅದರ ಬಗ್ಗೆ ತಾನು ಅಭಿಪ್ರಾಯ ವ್ಯಕ್ತಪಡಿಸಲಾರೆ. ಆದರೆ, ಪಾರದರ್ಶಕ ತನಿಖೆ ನಡೆಯಬೇಕು ಎಂದು ಆಗ್ರಹಿಸುತ್ತೇನೆ. ಅಲ್ಲದೆ, ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು’’ ಎಂದರು.
ಸರಕಾರ ಘೋಷಿಸಿದ ಪರಿಹಾರದ ಬಗ್ಗೆ ತಮಗೆ ಆಸಕ್ತಿ ಇಲ್ಲ. ತಮಗೆ ನ್ಯಾಯ ಬೇಕು ಎಂದು ತಾನು ಭೇಟಿಯಾದ ಸಂದರ್ಭ ಸಂತ್ರಸ್ತರ ಕುಟುಂಬದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ‘‘ತಮ್ಮನ್ನು ತಡೆಯಲು ಎಲ್ಲ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಯಾರೊಬ್ಬರೂ ಭೇಟಿಯಾಗಲು ಸಾಧ್ಯವಾಗದಂತೆ ಸಂತ್ರಸ್ತ ಕುಟುಂಬವನ್ನು ಪೊಲೀಸ್ ಪಡೆ ಸುತ್ತುವರಿದಿದೆ. ಆದರೆ, ಆರೋಪಿಗಳನ್ನು ಬಂಧಿಸಲು ಸರಕಾರ ಪೊಲೀಸ್ ಪಡೆಯನ್ನು ನಿಯೋಜಿಸಿಲ್ಲ. ಘಟನೆ ನಡೆಯುವಾಗ ಪೊಲೀಸರು ಎಲ್ಲಿದ್ದರು. ಪೊಲೀಸರದ್ದು ನಾಯಕರನ್ನು ತಡೆಯುವ ಕೆಲಸವೇ?’’ ಎಂದು ಅವರು ಪ್ರಶ್ನಿಸಿದ್ದಾರೆ.
ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡಿದ ಮರಣೋತ್ತರ ವರದಿಯ ಪ್ರತಿ ಅಸ್ಪಷ್ಟವಾಗಿದೆ. ಸಚಿವರ ರಾಜೀನಾಮೆ ನೀಡುವ ಹಾಗೂ ಅವರ ಪುತ್ರನನ್ನು ಬಂಧಿಸುವವರೆಗೆ ತಾನು ಹೋರಾಟ ಮುಂದುವರಿಸಲಿದ್ದೇನೆ. ತಾನು ಸಂತ್ರಸ್ತರ ಕುಟುಂಬದ ಮುಂದೆ ಈ ಪ್ರತಿಜ್ಞೆ ಮಾಡಿದ್ದೇನೆ ಎಂದು ಅವರು ಹೇಳಿದರು.







