ದೆಹಲಿ ಗಲಭೆ ವಿಚಾರಣೆ ವೇಳೆ ಪೊಲೀಸರಿಗೆ ಛೀಮಾರಿ ಹಾಕಿದ್ದ ನ್ಯಾಯಾಧೀಶರ ವರ್ಗಾವಣೆ !

(ಫೈಲ್ ಫೋಟೊ - PTI)
ಹೊಸದಿಲ್ಲಿ : ಕಳೆದ ವರ್ಷ ನಡೆದ "ದೆಹಲಿ ಹಿಂಸಾಚಾರದ ಬಗ್ಗೆ ಜಡ್ಡಗಟ್ಟಿದ ಮತ್ತು ವಿಡಂಬನಾತ್ಮಕ ತನಿಖೆ ನಡೆಸಿದ" ದೆಹಲಿ ಪೊಲೀಸರಿಗೆ ಪ್ರಕರಣದ ವಿಚಾರಣೆ ವೇಳೆ ಛೀಮಾರಿ ಹಾಕಿದ್ದ ವಿಚಾರಣಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ.
ಕರ್ಕರ್ದೂಮ ಜಿಲ್ಲಾ ನ್ಯಾಯಾಲಯದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿ ವಿನೋದ್ ಯಾದವ್ ದೆಹಲಿ ಗಲಭೆಗೆ ಸಂಬಂಧಿಸಿದ ಹಲವು ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದರು. ಇದೀಗ ಅವರನ್ನು ಹೊಸದಿಲ್ಲಿ ಜಿಲ್ಲೆಯ ರೌಸ್ಅವೆನ್ಯೂ ಜಿಲ್ಲಾ ನ್ಯಾಯಾಲಯಕ್ಕೆ ವಿಶೇಷ ನ್ಯಾಯಾಧೀಶರಾಗಿ (ಪಿಸಿ ಕಾಯ್ದೆ) (ಸಿಬಿಐ) ವರ್ಗಾಯಿಸಲಾಗಿದೆ. ಈ ಹುದ್ದೆಯಲ್ಲಿದ್ದ ನ್ಯಾಯಾಧೀಶ ವೀರೇಂದ್ರ ಭಟ್ ಅವರು ಇದೀಗ ಕರ್ಕರ್ದೂಮಾ ನ್ಯಾಯಾಲಯದ ಎಎಸ್ಜೆ ಆಗಲಿದ್ದಾರೆ.
ದೆಹಲಿ ಹಿಂಸಾಚಾರ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಲು ವಿಫಲವಾಗಿರುವುದು ಪ್ರಜಾಪ್ರಭುತ್ವದ ಕಾವಲು ವ್ಯವಸ್ಥೆಯ ಚಿತ್ರಹಿಂಸೆ ಎಂದು ವಿನೋದ್ ಯಾದವ್ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದ್ದರು.
ತಕ್ಷಣದಿಂದ ಜಾರಿಗೆ ಬರುವಂತೆ ದೆಹಲಿ ಉನ್ನತ ನ್ಯಾಯಾಂಗ ಸೇವೆಯಲ್ಲಿರುವ ನ್ಯಾಯಾಧೀಶರ ನೇಮಕಾತಿ/ವರ್ಗಾವಣೆ ಆದೇಶವನ್ನು ಘನ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್ನ ನ್ಯಾಯಮೂರ್ತಿಗಳು ಹೊರಡಿಸಿದ್ದಾರೆ ಎಂದು ಸಾರ್ವಜನಿಕ ಪ್ರಕಟಣೆ ಹೇಳಿದೆ.
ವರ್ಗಾವಣೆಯಾಗಿರುವ ನ್ಯಾಯಾಧೀಶರು ಕರ್ತವ್ಯ ತೊರೆಯುವ ಮುನ್ನ ತೀರ್ಪು ಅಥವಾ ಆದೇಶ ಕಾಯ್ದಿರಿಸಿರುವ ಪ್ರಕರಣಗಳನ್ನು ಪಟ್ಟಿ ಮಾಡಬೇಕು ಎಂದು ರಿಜಿಸ್ಟ್ರಾರ್ ಜನರಲ್ ಮನೋಜ್ ಜೈನ್ ಅವರ ಸಹಿ ಇರುವ ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ವರ್ಗಾವಣೆಯ ಹಿಂದಿನ ದಿನವಷ್ಟೇ ಯಾದವ್, ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿ, "ಪ್ರತಿಜ್ಞೆ ಸ್ವೀಕರಿಸಿದ ಪೊಲೀಸ್ ಸಾಕ್ಷಿಗಳೇ ಸುಳ್ಳು ಹೇಳುತ್ತಿದ್ದಾರೆ" ಎಂದು ಪೊಲೀಸರ ವೈರುಧ್ಯದ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ್ದರು.







