ಪತಿಯ ಮನೆಯಲ್ಲಿ ಮಗಳ ಸಂಶಯಾಸ್ಪದ ಸಾವು: ತಾಯಿ ದೂರು
ಕೋಟ, ಅ.7: ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಗಳ ಸಾವಿನ ಬಗ್ಗೆ ತಾಯಿ ಸಂಶಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಮೃತರನ್ನು ಕುಂದಾಪುರ ಬಳ್ಳೂರು ನಿವಾಸಿ ಪೂರ್ಣಿಮಾ ಎಂಬವರ ಮಗಳು ಹಾಗೂ ಕೋಟತಟ್ಟು ಹಂದಟ್ಟುವಿನ ನಾಗೇಂದ್ರ ಎಂಬವರ ಪತ್ನಿ ಪಿ.ಮೋನಿಷಾ (22) ಎಂದು ಗುರುತಿಸಲಾಗಿದೆ. ಇವರಿಬ್ಬರು ಪ್ರೀತಿಸುತ್ತಿದ್ದು, ಹುಡುಗಿ ಮನೆಯವರು ಒಪ್ಪದಿದ್ದರೂ ನಾಗೇಂದ್ರ ಮನೆಯವರು ಸೇರಿ 2020ರ ಜು.26 ರಂದು ಇವರಿಬ್ಬರಿಗೆ ಮದುವೆ ಮಾಡಿಸಿದ್ದರೆನ್ನಲಾಗಿದೆ. ನಂತರ ಗಂಡನ ಮನೆಯಲ್ಲಿದ್ದ ಮೋನಿಷಾ, ಗಂಡು ಮಗುವಿಗೆ ಜನ್ಮ ನೀಡಿದ್ದಳು.
2021ರ ಅ.6ರಂದು ಸಂಜೆ ತಾಯಿಗೆ ಕರೆ ಮಾಡಿದ ಮೋನಿಷಾ, ಮಗು ಹೊಟ್ಟೆನೋವಿನಿಂದ ಬಳಲುತ್ತಿದ್ದರು ಗಂಡ ಆಸ್ಪತ್ರೆಗೆ ಕರೆದು ಹೋಗುತ್ತಿಲ್ಲ ಎಂದು ದೂರಿದ್ದಳು. ಬಳಿಕ ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲು ವಿಳಂಬ ಮಾಡಿದ ವಿಚಾರದಲ್ಲಿ ಬೇಸರಗೊಂಡ ಮೋನಿಷಾ ಬೆಡ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪತಿಯ ಮನೆಯವರು ಪೂರ್ಣಿಮಾರಿಗೆ ಕರೆ ಮಾಡಿ ತಿಳಿಸಿದರು ಎಂದು ದೂರಿನಲ್ಲಿ ಹೇಳಲಾಗಿದೆ.
ಮೋನಿಷಾಳನ್ನು ನಾಗೇಂದ್ರ ಹಾಗೂ ಅವರ ಮನೆಯವರು ಸರಿಯಾಗಿ ನೋಡಿಕೊಳ್ಳುವುದಿಲ್ಲ, ಸರಿಯಾಗಿ ಊಟೋಪಚಾರ ನೀಡುವುದಿಲ್ಲ ಹಾಗೂ ಮಗುವಿಗೆ ಬಟ್ಟೆ ಬರೆಯನ್ನು ತೆಗೆಸಿಕೊಡುವುದಿಲ್ಲವೆಂದು ಈ ಹಿಂದೆ ಮಗಳು ಹೇಳಿರುವ ಹಿನ್ನೆಲೆಯಲ್ಲಿ ತಾಯಿ ಪೂರ್ಣಿಮಾ, ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.







