ಮರೋಳಿ: ಮುಂದುವರಿದ ಚಿರತೆ ಹುಡುಕಾಟ
ಮಂಗಳೂರು, ಅ.7: ನಗರದ ಮರೋಳಿ ಜಯನಗರ ಸುತ್ತಮುತ್ತ ವ್ಯಾಪ್ತಿಯಲ್ಲಿ ಚಿರತೆ ಕಂಡು ಬಂದ ಹಿನ್ನಲೆಯಲ್ಲಿ ಗುರುವಾರ ಕೂಂಬಿಂಗ್ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.
ಮರೋಳಿ ಜಯನಗರದ 4ನೇ ಕ್ರಾಸ್‌ನ ಮನೆಯೊಂದರ ಬಳಿ ರವಿವಾರ ಸಂಜೆ 6:30ರ ವೇಳೆ ಚಿರತೆ ಪತ್ತೆಯಾಗಿತ್ತು. ಸೋಮವಾರ ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದರೂ ಚಿರತೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನಲೆಯಲ್ಲಿ ಮಾರ್ತಗುಡ್ಡೆ ಬಳಿ ಚಿರತೆ ಸೆರೆಗೆ ಬೋನು ಇರಿಸಲಾಗಿತ್ತು. ಬುಧವಾರ ಮಧ್ಯಾಹ್ನ 2:30ರ ವೇಳೆಗೆ ಮರೋಳಿ ಕನಪದವು ಬಳಿ ಮತ್ತೆ ಚಿರತೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ಕಾರ್ಯಾಚರಣೆ ಬಿರುಸು: ಚಿರತೆ ಸೆರೆಗಾಗಿ ಗುರುವಾರ ಬಂಟ್ವಾಳ, ಮಂಗಳೂರು ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಒಟ್ಟು 25ಕ್ಕೂ ಅಧಿಕ ಮಂದಿ ಮರೋಳಿ, ಜಯನಗರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕೂಂಬಿಂಗ್ ನಡೆಸಲಾಗಿದೆ. ಆದರೆ ಚಿರತೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ. ಬೋನು ಇಟ್ಟು ಸೆರೆಗೆ ಪ್ರಯತ್ನಿಸಲಾಗುವುದು ಮಾತ್ರವಲ್ಲದೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ತಿಳಿಸಿದ್ದಾರೆ.







