ಕೋವಿಡ್ ಸಮಯದಲ್ಲಿ ಜನಸೇವೆಗೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ: ಶಾಸಕ ರಾಜೇಶ್ ನಾಯ್ಕ್
ಬೆಳ್ಳೂರು ದೇವಸ್ಥಾನದ ರಥಬೀದಿ ಕಾಂಕ್ರೀಟ್ ಕಾಮಗಾರಿಗೆ ಶಿಲಾನ್ಯಾಸ

ಬಂಟ್ವಾಳ, ಅ.7: ರಾಜಕೀಯ ಜೀವನದಲ್ಲಿ ಟೀಕೆ, ಆರೋಪಗಳು ಸಾಮಾನ್ಯವಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ಚಿಂತನೆ ಯಂತೆ ಸಮಾಜದ ಸಮಸ್ಯೆ, ಕಷ್ಟಗಳನ್ನು ನಮ್ಮ ಸ್ವಂತದ್ದು ಎಂದು ಭಾವಿಸಿ ಮುಂದುವರಿದಾಗ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು.
ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ರಥಬೀದಿಗೆ 1.75 ಕೋಟಿ ರೂ. ವೆಚ್ಚದ ಕಾಂಕ್ರೀಟ್ ಕಾಮಗಾರಿಗೆ ಗುರುವಾರ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಒಂದು ಗ್ರಾಮದ ಧಾರ್ಮಿಕ ಮತ್ತು ಶೈಕ್ಷಣಿಕ ಸ್ಥಳಗಳು ಅಭಿವೃದ್ಧಿಯಾದಾಗ ಆ ಗ್ರಾಮ ಅಭಿವೃದ್ಧಿಯಾಗಲಿದೆ. ಗ್ರಾಮಕ್ಕೆ ರಸ್ತೆ ಸಹಿತ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿದಾಗ ಗ್ರಾಮದ ಅಭಿವೃದ್ಧಿಗೆ ಇನ್ನಷ್ಟು ಸಹಕಾರ ಆಗಲಿದೆ. ಹೀಗಾಗಿ ನನ್ನ ಕ್ಷೇತ್ರದ ಧಾರ್ಮಿಕ ಕ್ಷೇತ್ರಗಳ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ನೀಡಲಾಗುತ್ತಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಶಾಸಕನಾಗಿ ಜನರ ಸೇವೆ ಮಾಡಲು ನನಗೆ ಅವಕಾಶ ದೊರೆತಿರುವುದು ಮಹಾ ಭಾಗ್ಯವಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲೂ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಹೇಳಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ದೇವಸ್ಥಾನದ ರಥ ಸಾಗುವ ಹಾದಿಯ ಅಭಿವೃದ್ಧಿ ಹಲವು ವರ್ಷಗಳ ಬೇಡಿಕೆಯಾಗಿದ್ದು ಪ್ರಸಕ್ತ ಅದು ಕಾಂಕ್ರೀಟ್ ಕಾಮಗಾರಿಯ ಮೂಲಕ ಈಡೇರುತ್ತಿದೆ. ಕಾವೇಶ್ವರನ ಅನುಗ್ರಹದಿಂದ ಶಾಸಕರ ಕಾಳಜಿಯಿಂದ ಅದು ಈಡೇರುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ೭೫೦ ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿದ್ದು 8.65 ಕೋ.ರೂ.ಗಳ ಅಭಿವೃದ್ಧಿ ಕಾರ್ಯಗಳು ಬಡಗಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯಲ್ಲೇ ಅನುಷ್ಠಾನಗೊಂಡಿದೆ ಎಂದರು.
ಗ್ರಾಮದಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ ಕುಸಿದು ಹಾನಿಗೊಳಗಾದ 2 ಕುಟುಂಬಗಳಿಗೆ ಶಾಸಕರು ಪರಿಹಾರ ಧನದ ಚೆಕ್ ವಿತರಿಸಿದರು.
ಬಡಗಬೆಳ್ಳೂರು ಗ್ರಾ.ಪಂ. ಅಧ್ಯಕ್ಷ ಜಿ.ಪ್ರಕಾಶ್ ಆಳ್ವ, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಗುತ್ತಿಗೆದಾರರಾದ ಸುಧಾಕರ ಶೆಟ್ಟಿ ಮುಗ್ರೋಡಿ, ಅನಿಲ್ ಶೆಟ್ಟಿ, ಕಾರ್ಯಪಾಲಕ ಎಂಜಿನಿಯರ್ ಪ್ರಭಾಕರ್ ಟಿ.ಎಂ, ಕಿರಿಯ ಎಂಜಿನಿಯರ್ ಪ್ರಸನ್ನ ರಾವ್, ದಾಮೋದರ್ ಉಪಸ್ಥಿತರಿದ್ದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್. ಶೆಟ್ಟಿ ಸ್ವಾಗತಿಸಿದರು. ಸಮಿತಿ ಸದಸ್ಯ ದಿವಾಕರ್ ನಾಯ್ಕ್ ವಂದಿಸಿದರು. ಪ್ರಕಾಶ್ ಬೆಳ್ಳೂರು ಕಾರ್ಯಕ್ರಮ ನಿರ್ವಹಿಸಿದರು.









