ಚಿತ್ರಪಾಡಿ ವಸತಿ ಸಮುಚ್ಚಯದ ಕೊಳಚೆ ನೀರು ಕೃಷಿ ಭೂಮಿಗೆ ಆರೋಪ: ಗ್ರಾಮಸ್ಥರಿಂದ ಪ್ರತಿಭಟನೆ

ಕೋಟ ಅ.7: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಿತ್ರಪಾಡಿ ವಾರ್ಡ್ ನಲ್ಲಿ ವಸತಿ ಸಮುಚ್ಚಯದ ಕೊಳಚೆ ನೀರು ಹಲವು ವರ್ಷದಿಂದ ಕೃಷಿ ಭೂಮಿಗೆ ಹಾಗೂ ನದಿಗೆ ಬಿಡುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಹಲವು ಬಾರಿ ಪಟ್ಟಣ ಪಂಚಾಯತ್ ಗೆ ಮನವಿ ಸಲ್ಲಿಸಲಾಯಿತು. ಗ್ರಾಮಸ್ಥರ ಮನವಿ ಮೇರೆಗೆ ವಸತಿ ಸಮುಚ್ಚಯದ ಮುಖ್ಯಸ್ಥರಿಗೆ ನೋಟೀಸ್ ನೀಡಿದರು ಯಾವುದೇ ಪ್ರಯೋಜನವಾಗಲಿಲ್ಲ ಎಂದು ಚಿತ್ರಪಾಡಿ ನಾಗರೀಕ ವೇದಿಕೆ ಹಾಗೂ ಗ್ರಾಮಸ್ಥರು ಚಿತ್ರಪಾಡಿ ಮಾರಿಯಮ್ಮ ಗುಡಿಯ ಬಳಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಚಿತ್ರಪಾಡಿ ನಾಗರೀಕ ವೇದಿಕೆಯ ಮುಖಂಡ ಚಂದ್ರಶೇಖರ ಉಪಾಧ್ಯ ಮಾತನಾಡಿ ಹಲವು ವರ್ಷದಿಂದ ಚಿತ್ರಪಾಡಿ ಗ್ರಾಮದಲ್ಲಿ ವಸತಿ ಸಮುಚ್ಚಯದ ಕೊಳಚೆ ನೀರನ್ನು ಕೃಷಿ ಭೂಮಿಗೆ ಹಾಗೂ ನದಿಗೆ ಬಿಡುತ್ತಿದ್ದು ಇದರಿಂದಾಗಿ ನಮ್ಮ ಕೃಷಿ ನಾಶವಾಗಿದೆ. ನದಿಗೆ ಇಳಿದವರಿಗೆ ಚರ್ಮ ಕಾಯಿಲೆ ಬಂದಿದೆ, ಅಲ್ಲದೆ ಈ ಪರಿಸರದ ಎಲ್ಲಾ ಬಾವಿಗಳ ನೀರು ಹಾಳಾಗಿದೆ, ನದಿಯಲ್ಲಿ ಮೀನುಗಳು ನಾಶವಾಗಿದೆ. ಇದರ ಬಗ್ಗೆ ಹಲವು ಬಾರಿ ಸ್ಥಳೀಯ ಪಟ್ಟಣ ಪಂಚಾಯತ್ ನಲ್ಲಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ, ಅದಕ್ಕಾಗಿ ಇಂದು ಚಿತ್ರಪಾಡಿ ಗ್ರಾಮಸ್ಥರು ಸೇರಿ ಕೊಳಚೆ ನೀರಿನ ಪೈಪ್ ತೆರವು ಗೊಳಿಸಲು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸ್ಥಳಕ್ಕಾಗಮಿಸಿದ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ ಹಾಗೂ ಪ. ಪಂ. ಮುಖ್ಯಅಧಿಕಾರಿ ಶಿವ ನಾಯಕ್, ವಾರ್ಡ್ ಸದಸ್ಯೆ ಸುಕನ್ಯ ಶೆಟ್ಟಿ, ಪ. ಪಂ. ಸದಸ್ಯರಾದ ಕಾರ್ಕಡ ರಾಜು ಪೂಜಾರಿ, ಶ್ಯಾಮ್ ಸುಂದರ್ ನಾಯಿರಿ, ಸಂಜೀವ ಕಾರ್ಕಡ ಹಾಗೂ ಸಮಾಜ ಮುಖಿ ಚಿಂತಕ ಪತ್ರಕರ್ತ ರಮೇಶ್ ಮೆಂಡನ್ ಇವರು ಪ್ರತಿಭಟನಕಾರರಲ್ಲಿ ಕಾಲಾವಕಾಶ ಕೋರಿ ಮನವೊಲಿಸಲು ಪ್ರಯತ್ನಪಟ್ಟರು ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಪ್ರತಿಭಟನಕರಾರು ಕೊಳಚೆ ನೀರಿನ ಪೈಪ್ ತೆರವಿಗೆ ಪಟ್ಟು ಹಿಡಿದರು. ಇದರಿಂದಾಗಿ ವಸತಿ ಸಮುಚ್ಚಯದ ಮುಖ್ಯಸ್ಥರನ್ನು ಕರೆಸಿ ಅವರ ಮನವೊಲಿಸಿ ಸದ್ಯದ ಪರಿಸ್ಥಿತಿಯಲ್ಲಿ ವಸತಿ ನೀರನ್ನು ಸಕ್ಕಿಂಗ್ ಯಂತ್ರದ ಮೂಲಕ ತೆರವು ಗೊಳಿಸಲು ತಿಳಿಸಲಾಯಿತು. ಅಲ್ಲದೆ ವಸತಿ ಸಮುಚ್ಚಯದ ಮುಖ್ಯಸ್ಥರಲ್ಲಿ ಎರಡು ತಿಂಗಳ ಒಳಗೆ ಶಾಶ್ವತ ಪರಿಹಾರಕ್ಕೆ ಭರವಸೆ ಪಡೆದು ಕೊಳಚೆ ನೀರಿನ ಪೈಪ್ ನ್ನು ತೆರವು ಗೊಳಿಸಲಾಯಿತು.






.jpeg)
.jpeg)


