ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ : ಸಚಿವರ ಪುತ್ರನಿಗೆ ಉ.ಪ್ರ. ಪೊಲೀಸರ ಸಮನ್ಸ್

ಲಖಿಂಪುರ ಖೇರಿ (ಉತ್ತರಪ್ರದೇಶ), ಅ. 7: ರೈತರ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿಯಾಗಿರುವ ಕೇಂದ್ರ ಸಚಿವರ ಪುತ್ರ ಆಶೀಷ್ಮಿಶ್ರಾಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಮನ್ಸ್ ನೀಡಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ತೆಗೆದುಕೊಂಡ ಕ್ರಮಗಳು ಹಾಗೂ ಬಂಧನದ ಕುರಿತು ಸುಪ್ರೀಂ ಕೋರ್ಟ್ ಉತ್ತರಪ್ರದೇಶ ಸರಕಾರವನ್ನು ಪ್ರಶ್ನಿಸಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಆಶೀಷ್ ಮಿಶ್ರಾಗೆ ಇದೇ ಮೊದಲ ಬಾರಿಗೆ ಪೊಲೀಸರು ಸಮನ್ಸ್ ನೀಡಿದ್ದಾರೆ. ಆಶೀಷ್ ವಿರುದ್ಧ ಸೋಮವಾರ ಎಫ್ಐಆರ್ ದಾಖಲಿಸಲಾಗಿತ್ತು.
ಶುಕ್ರವಾರ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ನೋಟಿಸ್ ಅನ್ನು ಪೊಲೀಸರು ಕೇಂದ್ರ ಸಚಿವರ ಮನೆಯ ಹೊರಗೆ ಅಂಟಿಸಿದ್ದಾರೆ. ಅದುವರೆಗೆ ಪೊಲೀಸರು ಆಶೀಷ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿದ್ದವು. ಪೊಲೀಸರು ಉನ್ನತ ವ್ಯಕ್ತಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ‘‘ಆಶೀಷ್ ಮಿಶ್ರಾ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಆದಷ್ಟು ಬೇಗ ವಿಚಾರಣೆಗ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ. ಇದನ್ನು ಅನುಸರಿಸಿ ಅವರ ವಿರುದ್ಧ ಮುಂದಿನ ಕ್ರಮಗಳು ಮುಂದುವರಿಯಲಿವೆ’’ ಎಂದು ಲಕ್ನೋ ವಲಯದ ಐಜಿ ಲಕ್ಷ್ಮೀ ಸಿಂಗ್ ಹೇಳಿದ್ದಾರೆ. ‘‘ನಾವು ಯಾರನ್ನೂ ರಕ್ಷಿಸಲು ಪ್ರಯತ್ನಿಸುತ್ತಿಲ್ಲ. ನೆಲದ ಕಾನೂನು ಎಲ್ಲರಿಗೂ ಸಮಾನ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡುತ್ತೇವೆ’’ ಎಂದು ಲಕ್ಷ್ಮೀ ಸಿಂಗ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು 13 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇವರಲ್ಲಿ ಇಬ್ಬರನ್ನು ಇಂದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.







