ಉದ್ಯೋಗದಲ್ಲಿ ಭಡ್ತಿ ಸಂದರ್ಭ ಅಂಕಿಅಂಶ ಸಂಗ್ರಹದ ಅಗತ್ಯವಿಲ್ಲ: ಸುಪ್ರೀಂಗೆ ಕೇಂದ್ರದ ಒತ್ತಾಯ

ಹೊಸದಿಲ್ಲಿ, ಅ.7: ಸರಕಾರಿ ಉದ್ಯೋಗದಲ್ಲಿ ಎಸ್ಸಿ/ಎಸ್ಟಿ ಸಮುದಾಯದವರಿಗೆ ಭಡ್ತಿ ಸಂದರ್ಭ ಮೀಸಲಾತಿ ನಿರ್ಧರಿಸಲು ಪರಿಮಾಣಾತ್ಮಕ ಅಂಕಿಅಂಶ ಸಂಗ್ರಹಿಸುವ ಸೂಚನೆಯನ್ನು ಕೈಬಿಡಬೇಕು ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್ ಅನ್ನು ಆಗ್ರಹಿಸಿದೆ.
11 ಪ್ರತ್ಯೇಕ ಹೈಕೋರ್ಟ್ಗಳು ಮೀಸಲಾತಿ ಕುರಿತು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಧೀಶ ಎಲ್ ನಾಗೇಶ್ವರ ರಾವ್ ನೇತೃತ್ವದ ನ್ಯಾಯಪೀಠ ಬುಧವಾರ ಕೈಗೆತ್ತಿಕೊಂಡ ಸಂದರ್ಭ ಕೇಂದ್ರ ಸರಕಾರದ ಪ್ರತಿನಿಧಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಈ ಒತ್ತಾಯ ಮಂಡಿಸಿದರು. ಸರಕಾರಿ ಉದ್ಯೋಗದಲ್ಲಿ ಎಸ್ಟಿ/ಎಸ್ಸಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಿರುವುದನ್ನು ಸಮರ್ಥಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಿಮಾಣಾತ್ಮಕ ಅಂಕಿಅಂಶವನ್ನು ಸಂಗ್ರಹಿಸಬೇಕು ಎಂದು 2006ರಲ್ಲಿ ಸುಪ್ರೀಂಕೋರ್ಟ್ ನ್ಯಾಯಪೀಠ ನೀಡಿದ್ದ ಆದೇಶವನ್ನು ಕೈಬಿಡಬೇಕು ಎಂದು ಅಟಾನಿಧ ಜನರಲ್ ಆಗ್ರಹಿಸಿದರು.
ಎಸ್ಸಿ/ಎಸ್ಟಿ ಸಮುದಾಯದವರಿಗೆ ಮೀಸಲಿರಿಸುವ ಹುದ್ದೆಗಳ ಪ್ರಮಾಣವನ್ನು ಖಚಿತಪಡಿಸಲು ಎಲ್ಲಾ ಸರಕಾರಿ ಇಲಾಖೆಗಳು ರೋಸ್ಟರ್ ಪದ್ಧತಿಯನ್ನು ಅನುಸರಿಸಿಸುತ್ತಿವೆ. ಎಸ್ಸಿ/ಎಸ್ಟಿ ಸಮುದಾಯದ ಸೂಕ್ತ ಪ್ರಮಾಣಕ್ಕೆ ಅನುಗುಣವಾಗಿ ರೋಸ್ಟರ್ ಪದ್ಧತಿಯ ಮೂಲಕ ಮೀಸಲು ಹುದ್ದೆ ಭರ್ತಿ ಮಾಡಲಾಗುತ್ತಿದೆ. 75 ವರ್ಷದಲ್ಲಿ ನಾವು ಎಸ್ಟಿ/ಎಸ್ಸಿಗಳನ್ನು ಏಕರೀತಿಯ ಅರ್ಹತೆಗೆ ತರಲಾಗಲಿಲ್ಲ ಎಂಬುದು ಜೀವನದ ಸತ್ಯವಾಗಿದೆ. ಪರಿಮಾಣಾತ್ಮಕ ಅಂಕಿಅಂಶ ವಾಸ್ತವಿಕವಾಗಿಲ್ಲ. ಸರಕಾರಿ ಉದ್ಯೋಗಿಗಳನ್ನು ವಾರ್ಷಿಕ ರಹಸ್ಯ ವರದಿಯ ಆಧಾರದಲ್ಲಿ ಭಡ್ತಿಗೊಳಿಸಲಾಗುತ್ತದೆ. ಆದ್ದರಿಂದ ಇತರ ಮಾನದಂಡದ ಅಗತ್ಯವಿಲ್ಲ ಎಂದ ಅವರು, ಪ್ರತೀ 10 ವರ್ಷಕ್ಕೊಮ್ಮೆ ನಡೆಯುವ ಜನಗಣತಿಯ ಆಧಾರದಲ್ಲಿ ಮೀಸಲಾತಿ ನೀತಿಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದರು.







