ರೊನಾಲ್ಡೊ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದುಪಡಿಸಲು ನ್ಯಾಯಾಲಯ ಶಿಫಾರಸ್ಸು

ಕ್ರಿಸ್ಟಿಯಾನೊ ರೊನಾಲ್ಡೊ (ಫೋಟೊ PTI)
ಲಾಸ್ ಎಂಜಲೀಸ್: ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ವಿರುದ್ಧ ಸಿವಿಲ್ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಲು ಅಮೆರಿಕದ ನ್ಯಾಯಾಲಯ ಶಿಫಾರಸ್ಸು ಮಾಡಿದೆ.
2009ರಲ್ಲಿ ಲಾಸ್ ವೇಗಸ್ನ ತಾನಿದ್ದ ಹೋಟೆಲ್ ರೂಂ ಮೇಲೆ ರೊನಾಲ್ಡೊ ದಾಳಿ ಮಾಡಿದ್ದರು ಎಂದು ಮಾಜಿ ಮಾಡೆಲ್ ಕ್ಯಾಥರೀನ್ ಮಯೋರ್ಗಾ ದೂರು ನೀಡಿದ್ದರು. ಪೋರ್ಚ್ಗೀಸ್ ಇಂಟರ್ ನ್ಯಾಷನಲ್ ಈ ಲೈಂಗಿಕ ಹಲ್ಲೆ ಆರೋಪವನ್ನು ನಿರಾಕರಿಸುತ್ತಾ ಬಂದಿದ್ದು, ಅವರ ಸಮಾಗಮ ಪರಸ್ಪರ ಸಹಮತದ ಸಮಾಗಮವಾಗಿತ್ತು ಎಂದು ಪ್ರತಿಪಾದಿಸಿತ್ತು.
ಮ್ಯಾಂಚೆಸ್ಟರ್ ಯುನೈಟೆಡ್ನ ಮುನ್ಪಡೆ ಆಟಗಾರನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಎರಡು ವರ್ಷ ಹಿಂದೆ ಕೈಬಿಡಲಾಗಿತ್ತು ಹಾಗೂ ಪ್ರಕರಣದಲ್ಲಿ ಯಾವುದೇ ಶಿಕ್ಷೆಯಾಗುವ ಸಾಧ್ಯತೆ ಇಲ್ಲ ಎಂದು ರೊನಾಲ್ಡೊ ಪರ ವಕೀಲರು ಹೇಳಿದ್ದರು. ಆದರೆ ಮಯೋರ್ಗಾ ಪರಿಹಾರಕ್ಕಾಗಿ ಸಿವಿಲ್ ದಾವೆಗೆ ಮುಂದಾಗಿದ್ದರು.
ಈ ಸಂಬಂಧ ಬುಧವಾರ ತಮ್ಮ ಶಿಫಾರಸ್ಸು ನೀಡಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಡೇನಿಯಲ್ ಅರ್ಲ್ಬೆಟ್ಸ್, ಪ್ರಕರಣ ರದ್ದುಪಡಿಸುವಂತೆ ಕೋರಿದ್ದ ರೊನಾಲ್ಡೊ ಅವರ ನಿಲುವಳಿ ಅರ್ಜಿಯನ್ನು ಮಾನ್ಯ ಮಾಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಶಿಫಾರಸ್ಸನ್ನು ಪ್ರಕರಣ ವಿಚಾರಣೆ ನಡೆಸುತ್ತಿರುವ ಪ್ರತ್ಯೇಕ ನ್ಯಾಯಾಧೀಶರು ಪರಾಮರ್ಶೆ ಮಾಡಲಿದ್ದಾರೆ. ರೊನಾಲ್ಡೊ ಹಾಗೂ ಅವರ ಕಾನೂನು ತಂಡದ ನಡುವಿನ ಸಂಭಾಷಣೆಯ ಸೋರಿಕೆಯಾದ ಅಂಶಗಳನ್ನು ಆಧರಿಸಿ ಮಯೋರ್ಗಾ ವಕೀಲರು ದಾವೆ ಹೂಡಿದ್ದಾಗಿ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.