ಸಾಕ್ಷ್ಯಗಳಿಲ್ಲದೇ, ಒತ್ತಡದಿಂದ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ: ಲಖಿಂಪುರ್ ಪ್ರಕರಣದ ಕುರಿತು ಆದಿತ್ಯನಾಥ್

ಲಕ್ನೋ: "ಯಾರಿಗೂ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ. ಒತ್ತಡದಿಂದ ನಾವು ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ." ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ. ಲಖಿಂಪುರ್ ಖೇರಿ ಹಿಂಸಾಚಾರದ ಕುರಿತು ಕೇಂದ್ರ ಸಚಿವ ಅಜಯ್ ಕುಮಾರ್ ನನ್ನು ಬಂಧಿಸಬೇಕೆಂದು ವಿಪಕ್ಷಗಳು ಒತ್ತಡ ಹಾಕುತ್ತಿರುವ ಹಿನ್ನೆಲೆಯಲ್ಲಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.
ನಾಲ್ಕು ಮಂದಿ ರೈತರು ಸೇರಿದಂತೆ ಒಟ್ಟು 8 ಮಂದಿಯನ್ನು ಬಲಿಪಡೆದ ಹಿಂಸಾಚಾರವನ್ನು ʼದುರದೃಷ್ಟಕರʼ ಎಂದು ಬಣ್ಣಿಸಿದ ಅವರು, ಸರಕಾರವು ಈ ಕುರಿತು ಆಳವಾಗಿ ಅಧ್ಯಯನ ನಡೆಸುತ್ತಿದೆ ಎಂದು ಹೇಳಿದ್ದಾರೆ. "ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ. ನ್ಯಾಯಾಂಗವು ಎಲ್ಲರಿಗೂ ಭದ್ರತೆಯ ಖಾತರಿ ನೀಡುತ್ತದೆ. ನಾವು ಕಾನೂನು ಕೈಗೆ ತೆಗೆದುಕೊಳ್ಳಬೇಕಾದ ಅವಶ್ಯಕತೆಯಿಲ್ಲ. ಅದು ಯಾರೇ ಆದರೂ ಸರಿ" ಎಂದು ಅವರು ಹೇಳಿದ್ದಾರೆ.
ಸರಕಾರವು ಕೇಂದ್ರ ಸಚಿವರ ಪುತ್ರನನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, "ಅಂತಹಾ ವೀಡಿಯೋ ಇಲ್ಲ. ನಾವು ಈಗಾಗಲೇ ನಂಬರ್ ಗಳನ್ನು ನೀಡಿದ್ದೇವೆ. ಯಾರೊಂದಿಗಾದರೂ ಸಾಕ್ಷ್ಯಗಳಿದ್ದರೆ ಅದನ್ನು ಅಪ್ಲೋಡ್ ಮಾಡಬಹುದಾಗಿದೆ. ಎಲ್ಲವೂ ಪಾರದರ್ಶಕವಾಗಿದೆ. ಯಾರೊಂದಿಗೂ ಅನ್ಯಾಯ ನಡೆಯುವುದಿಲ್ಲ. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಇತ್ತಡದಲ್ಲಿ ಯಾವ ಕ್ರಮಗಳನ್ನೂ ಕೈಗೊಳ್ಳುವುದಿಲ್ಲ" ಎಂದು ಅವರು ಹೇಳಿದ್ದಾರೆ.