ಮೈಶುಗರ್ ಸರಕಾರಿ ಸ್ವಾಮ್ಯದಲ್ಲೇ ಆರಂಭಕ್ಕೆ ಆಗ್ರಹ; ಮಳವಳ್ಳಿಯಿಂದ ಮಂಡ್ಯದವರೆಗೆ ಬೈಕ್ ರ್‍ಯಾಲಿ

ಮಂಡ್ಯ, ಅ.8: ಮೈಶುಗರ್ ಕಾರ್ಖಾನೆ ಸರಕಾರಿ ಸ್ವಾಮ್ಯದಲ್ಲಿಯೇ ನಡೆಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತಸಂಘ ಹಾಗೂ ಕಟ್ಟು ಬೆಳೆಗಾರರ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಮಳವಳ್ಳಿಯಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ್‍ಯಾಲಿ ನಡೆಯಿತು.
ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಸರಕಾರಿ ಸ್ವಾಮ್ಯದಲ್ಲಿಯೆ ನಡೆಸಬೇಕು. ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ ಕಾರ್ಖಾನೆ ಸುಸ್ಥಿರಗೊಳಿಸಲು ಅಗತ್ಯ ಹಣವನ್ನು ರಾಜ್ಯ ಸರಕಾರ ಶೀಘ್ರವಾಗಿ ನೀಡಬೇಕು. ಟನ್ ಕಬ್ಬಿಗೆ 5 ಸಾವಿರ ರೂ. ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
12 ತಿಂಗಳೊಳಗೆ ಕಬ್ಬು ಕಟಾವು ಮಾಡಬೇಕು. ವಿಳಂಬದಿಂದ ನಷ್ಟವಾದರೆ ಪರಿಹಾರ ನೀಡಬೇಕು. ಸರಬರಾಜು ಮಾಡಿದ 14 ದಿನಗಳೊಳಗೆ ಹಣ ಪಾವತಿ ಮಾಡಬೇಕು. ಎಥನಾಲ್ ಬಳಕೆ ಪ್ರಮಾಣವನ್ನು ಶೇ.25ರಷ್ಟು ಹೆಚ್ಚಿಸಬೇಕು. ವಿದೇಶಿ ಕಚ್ಚಾ ಸಕ್ಕರೆ ಮೇಲೆ ಆಮದು ಶುಲ್ಕವನ್ನು ಶೇ.40 ರಷ್ಟು ಹೆಚ್ಚಿಸಬೇಕು. ಕೆಲವು ಕಾರ್ಖಾನೆಗಳಲ್ಲಿ ತೂಕದಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು ವಂಚನೆ ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿರುವ ಮುರುಗೇಶ್ ನಿರಾಣಿ ಮೇಲೆ ವಂಚನೆ ಕೇಸು ದಾಖಲಿಸಿ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆ ರದ್ದುಪಡಿಸಿ ಸಹಕಾರಿ ರಂಗದಲ್ಲಿ ಕಾರ್ಖಾನೆ ಪ್ರಾರಂಭಿಸಬೇಕು. ಮಂಡ್ಯದಿಂದ ಕಬ್ಬು ಸಂಶೋಧನಾ ಕೇಂದ್ರ ಹಾಗೂ ಬೆಂಗಳೂರಿನಿಂದ ಸಕ್ಕರೆ ಆಯುಕ್ತರ ಕಛೇರಿಯನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಮಾಡಬಾರದು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಸಂಚಾಲಕ ಎನ್.ಎಲ್.ಭರತ್‍ರಾಜ್, ಕರ್ನಾಟಕ ಪ್ರಾಂತ ರೈತಸಂಘದ ಮಳವಳ್ಳಿ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜ ಮೂರ್ತಿ, ಜಿ.ಸಿ.ಸತೀಶ್, ಕರಿಯಪ್ಪ, ಶ್ರೀಕಂಠಸ್ವಾಮಿ, ಇತರರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.
“ಮೋದಿ ನೇತೃತ್ವದ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಮೇಲೆ ಪ್ರತಿದಿನ ಸರಾಸರಿ 50 ಮಂದಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದೊಂದು ಗಂಭೀರವಾದ ವಿಚಾರವಾಗಿದ್ದು, ದೇಶದ ದುಸ್ಥಿತಿಯ ಸಂಕೇತ ಎಂಬುವುದನ್ನು ಮರೆತು ಕೇಂದ್ರ ಮತ್ತು ರಾಜ್ಯ ಸರಕಾರಗಳು ಉಳ್ಳವರ ಪರ ಆಡಳಿತ ನಡೆಸುತ್ತಿವೆ.”-ಎನ್.ಎಲ್.ಭರತ್‍ರಾಜ್, ರಾಜ್ಯ ಸಂಚಾಲಕ, ಕರ್ನಾಟಕ ಕಬ್ಬು ಬೆಳೆಗಾರರ ಸಂಘ.







