ರವಿ ಕಟಪಾಡಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ
ಕೋಟ, ಅ.8: ಕೋಟದ ಪಂಚವರ್ಣ ಯುವಕ ಮಂಡಲದ ವತಿಯಿಂದ ಪ್ರತಿವರ್ಷ ನೀಡಲಾಗುವ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಕಳೆದ ಹಲವು ವರ್ಷಗಳಿಂದ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಮಾಡುವ ರವಿ ಕಟಪಾಡಿ ಅವರನ್ನು ಆಯ್ಕೆ ಮಾಡಲಾಗಿದೆ.
ನ.1ರಂದು ಕೋಟದ ವರುಣತೀರ್ಥ ಕೆರೆ ಸಮೀಪ ಆಯೋಜಿಸುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
ಕಳೆದ 24 ವರ್ಷಗಳಿಂದ ಕೋಟದ ಗ್ರಾಮೀಣ ಭಾಗದಲ್ಲಿ ವಿವಿಧ ಚಟುವ ಟಿಕೆಗಳ ಮೂಲಕ ಸೇವೆ ಸಲ್ಲಿಸುತ್ತಿರುವ ಪಂಚವರ್ಣ ಯುವಕ ಮಂಡಲ, ಸಂಸ್ಥೆಯ ಮೂಲಕ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯಕ್ರಮ ಸಹ ನಡೆಸಿಕೊಂಡು ಬರುತ್ತಿದೆ. ಈ ಹಿಂದೆ ಪ್ರಶಸ್ತಿಗೆ ಭಾಜನರಾದವರಲ್ಲಿ ಕನ್ನಡ ಚಿತ್ರರಂಗದ ರವಿ ಬಸ್ರೂರು, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ಕ್ರೀಡಾ ಕ್ಷೇತ್ರದ ಕಬ್ಬಡಿಪಟು ರಿಶಾಂಕ್ ದೇವಾಡಿಗ, ಕಲಾಕ್ಷೇತ್ರದಲ್ಲಿ ಕೋಟ ಸುರೇಶ್ ಬಂಗೇರ, ಎಚ್. ಶ್ರೀಧರ ಹಂದೆ, ಸಮಾಜಸೇವಕ ಹರೇಕಳ ಹಾಜಬ್ಬ, ಮುಂತಾದವರು ಸೇರಿದ್ದಾರೆ ಎಂದು ಸಂಘದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ತಿಳಿಸಿದ್ದಾರೆ.





