ಬೆಂಗಳೂರು: ಬಿಎಸ್ ವೈ ಆಪ್ತರ ಮನೆ ಮೇಲೆ ಮುಂದುವರಿದ ಐಟಿ ದಾಳಿ

ಬೆಂಗಳೂರು, ಅ.8: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಉಮೇಶ್, ಬಿ.ವೈ. ವಿಜಯೇಂದ್ರ ಅವರ ಆಪ್ತ ಅರವಿಂದ್ ಸೇರಿ ಪ್ರಮುಖ ಗುತ್ತಿಗೆದಾರರು ಹಾಗೂ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು, ಶುಕ್ರವಾರವೂ ಶೋಧಕಾರ್ಯ ಮುಂದುವರಿಸಿದರು.
ದಾಳಿಯ ವೇಳೆ ಕಂಪ್ಯೂಟರ್, ಹಾರ್ಡ್ ಡಿಸ್ಕ್‍ಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿ ಈ ಪೈಕಿ ನೀರಾವರಿ ಇಲಾಖೆಗೆ ಸಂಬಂಧಿಸಿದ ಗುತ್ತಿಗೆ ಕಡತಗಳು ಹೆಚ್ಚಾಗಿವೆ ಎಂದು ಹೇಳಲಾಗಿದೆ.
ಇಲ್ಲಿನ ಜಯನಗರದಲ್ಲಿ ಅರವಿಂದ್ ಅವರ ಮನೆ ಇದ್ದರೂ ವಸಂತನಗರದಲ್ಲಿ ತಂದೆ-ತಾಯಿ ಜತೆ ಅರವಿಂದ್ ವಾಸವಿದ್ದರು ಎನ್ನಲಾಗಿದ್ದು, ಒಟ್ಟಾರೆ ಈತನಿಗೆ ಸೇರಿದ ಕಟ್ಟಡಗಳಲ್ಲಿ ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿ ಕಡತಗಳನ್ನು ಜಾಲಾಡಿದ್ದಾರೆ.
ಪ್ರಮುಖ ಗುತ್ತಿಗೆದಾರ ಉಪ್ಪಾರ ಅವರ ಕಚೇರಿ ಹಾಗೂ ನಿವಾಸ ರಾಹುಲ್ ಎಂಟರ್‍ಪ್ರೈಸಸ್ ಮೇಲೆ ಕೂಡ ದಾಳಿ ಮುಂದುವರೆದಿದೆ. ಕಬ್ಬಿಣ ಮತ್ತು ಸಿಮೆಂಟ್ ಸಗಟು ಪೂರೈಕೆದಾರರಾಗಿರುವ ಸಹಕಾರ ನಗರದ ರಾಹುಲ್ ಎಂಟರ್‍ಪ್ರೈಸಸ್ ಮೇಲೆಯೂ ಗುರುವಾರ ದಾಳಿ ನಡೆಸಿದ್ದ ಆದಾಯತೆರಿಗೆ ಇಲಾಖೆ ಅಧಿಕಾರಿಗಳು, ರಾತ್ರಿ 11ರವರೆಗೂ ಶೋಧ ನಡೆಸಿದ್ದರು.
ಗುರುವಾರ ಈ ಸಂಸ್ಥೆಯ ಕಚೇರಿಯ ಬಾಗಿಲಿಗೆ ಬೀಗ ಹಾಕಿ ತೆರಳಿದ್ದರು. ಶುಕ್ರವಾರ ಬೆಳಗ್ಗೆಯಿಂದ ಮತ್ತೆ ಶೋಧ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಆದಾಯ ಏರಿಕೆ: ಉಮೇಶ್ ಆದಾಯದಲ್ಲಿ ದಿಢೀರ್ ಏರಿಕೆಯಾಗಿದ್ದು, ಕೇವಲ 2 ವರ್ಷದಲ್ಲಿ ಉಮೇಶ್ ಆದಾಯ ಶೇ. 300ರಷ್ಟು ಏರಿಕೆಯಾಗಿದೆ. ಕಾವೇರಿ ನೀರಾವರಿ ನಿಗಮ ಟೆಂಡರ್‍ನಲ್ಲಿ ಗೋಲ್‍ಮಾಲ್ ಆರೋಪ ಉಮೇಶ್ ಮೇಲಿದೆ.
ಕೃಷ್ಣ ಭಾಗ್ಯ ಜಲ ನಿಗಮ ಟೆಂಡರ್‍ನಲ್ಲೂ ಭ್ರಷ್ಟಾಚಾರ ನಡೆಸಿರುವ ಆರೋಪವಿದೆ. ಏಕೆಂದರೆ ಬಿಡುಗಡೆ ಮಾಡಿರುವ ಹಣಕ್ಕೂ ಕೆಲಸದ ವರ್ಕ್‍ಆಡರ್ರ್‍ಗೂ ವ್ಯತ್ಯಾಸವಿದೆ. ಎರಡೂ ಯೋಜನೆ ಪೂರ್ಣವಾದ ಬಳಿಕ ದಾಖಲೆಗಳಲ್ಲಿ ವ್ಯತ್ಯಾಸವಿದೆ. ಹೀಗಾಗಿ ಉಮೇಶ್ ಮನೆ ಮೇಲೆ ಐಟಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಎಲ್ಲೆಲ್ಲಿ ದಾಳಿ?: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಅವರ ಆಪ್ತ ಸಹಾಯಕ ಉಮೇಶ್ ಅವರ ರಾಜಾಜಿನಗರದ ಮನೆ ಮತ್ತು ಕಚೇರಿ, ಬಿ.ವೈ ವಿಜಯೇಂದ್ರ ಅವರ ಆಪ್ತ ಸಹಾಯಕ ಅರವಿಂದ್ ಅವರ ವಸಂತನಗರ ಮನೆ, ಖಾಸಗಿ ಲೆಕ್ಕ ಪರಿಶೋಧಕಿ ಅಮಲ ಅವರ ಹೆಗಡೆ ನಗರ ಮನೆ ಮತ್ತು ಕಚೇರಿ, ಗುತ್ತಿಗೆದಾರ ಡಿ.ವೈ.ಉಪ್ಪಾರ್ ಅವರ ಸದಾಶಿವನಗರದ ಕಚೇರಿ ಮತ್ತು ಬಾಗಲಕೋಟೆಯಲ್ಲಿರುವ ಮನೆ, ಗುತ್ತಿಗೆದಾರ ಶ್ರೀನಿವಾಸ್ ಅವರ ಕೊಪ್ಪಳದ ಮನೆ ಕಚೇರಿ, ಖಾಸಗಿ ಲೆಕ್ಕ ಪರಿಶೋಧಕ ಲಕ್ಷ್ಮಿಕಾಂತ್ ಅವರ ವಿದ್ಯಾರಣ್ಯಪುರದ ಮನೆ ಮತ್ತು ಕಚೇರಿ, ಕಟ್ಟಡ ಸಾಮಗ್ರಿ ಪೂರೈಕೆದಾರ ರಾಹುಲ್ ಅವರ ಸಹಕಾರದ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಉಮೇಶ್ ಸಿಎಂ ಕಚೇರಿಯಿಂದ ಹೊರಕ್ಕೆ
ಆದಾಯ ತೆರಿಗೆ ಇಲಾಖೆಯ ದಾಳಿಗೊಳಗಾಗಿರುವ ಎಂ.ಆರ್.ಉಮೇಶ್ ಅವರನ್ನು ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ನಿಯೋಜನೆ ಮಾಡಿದ್ದ ಆದೇಶವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಿಂಪಡೆದಿದೆ.
ಬಿಎಂಟಿಸಿಯ ಪುಟ್ಟೇನಹಳ್ಳಿಯ ಡಿಪೋ ಚಾಲಕ ಕಂ.ನಿರ್ವಾಹಕ ಹುದ್ದೆಯಲ್ಲಿದ್ದ ಉಮೇಶ್ 2007ರಿಂದಲೂ ನಿಯೋಜನೆ ಮೇಲೆ ರಾಜಕಾರಣಿಗಳ ಆಪ್ತ ಸಹಾಯಕರಾಗಿದ್ದರು. ಸದ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವಾಲಯದಲ್ಲಿ ಸಿಬ್ಬಂದಿಯಾಗಿದ್ದರು.
ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ. ವಿಜಯೇಂದ್ರ ಆಪ್ತರಾಗಿದ್ದ ಉಮೇಶ್ ಮತ್ತು ಅವರ ಜತೆ ನಿಕಟ ನಂಟು ಹೊಂದಿರುವ ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದರು. ಉಮೇಶ್ ನಿಯೋಜನೆಯನ್ನು ಹಿಂಪಡೆದು ಬಿಎಂಟಿಸಿಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.







