ಲಖಿಂಪುರ ಹಿಂಸಾಕಾಂಡ: ಪೊಲೀಸರ ಎದುರು ಹಾಜರಾಗದ ಆಶಿಶ್ ಮಿಶ್ರಾಗೆ ಎರಡನೇ ಬಾರಿ ಸಮನ್ಸ್

ಆಶಿಶ್ ಮಿಶ್ರಾ [photo: twitter.com/ANINewsUP]
ಲಖಿಂಪುರ ಖೇರಿ,ಅ.8: ಲಖಂಪುರ ಖೇರಿ ಜಿಲ್ಲೆಯ ತಿಕುನಿಯಾದಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣದ ಕುರಿತು ಪೊಲೀಸರ ನಿಷ್ಕ್ರಿಯತೆಯ ಕುರಿತು ಆಕ್ರೋಶದ ನಡುವೆಯೇ ಪ್ರತಿಭಟನಾನಿರತ ರೈತರ ಗುಂಪಿನ ಮೇಲೆ ವಾಹನವನ್ನು ಚಲಾಯಿಸಿದ ಆರೋಪವನ್ನು ಎದುರಿಸುತ್ತಿರುವ ಕೇಂದ್ರ ಸಹಾಯಕ ಗೃಹಸಚಿವ ಅಜಯ್ ಕುಮಾರ್ ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ಅವರು ಶುಕ್ರವಾರ ಬೆಳಿಗ್ಗೆ ಪೊಲೀಸರೆದುರು ವಿಚಾರಣೆಗೆ ಹಾಜರಾಗದೆ ನುಣುಚಿಕೊಂಡಿದ್ದಾರೆ.
ಆಶಿಷ್ ಬಂಧನಕ್ಕೆ ಹೆಚ್ಚುತ್ತಿರುವ ಪ್ರತಿಪಕ್ಷಗಳ ಆಗ್ರಹದ ನಡುವೆಯೇ ಪೊಲೀಸರ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಮೊದಲ ಬಾರಿಗೆ ಸಮನ್ಸ್ ಹೊರಡಿಸಿದ್ದರು. ಅವರ ಗೈರುಹಾಜರಿಯ ಹಿನ್ನೆಲೆಯಲ್ಲಿ ಪೊಲೀಸರು ಶುಕ್ರವಾರ ಎರಡನೇ ಬಾರಿ ಸಚಿವರ ನಿವಾಸದ ಹೊರಗೆ ಸಮನ್ಸ್ ಅಂಟಿಸಿದ್ದಾರೆ.
"ನನ್ನ ಮಗ ಅಮಾಯಕನಾಗಿದ್ದಾನೆ. ಆತ ಶನಿವಾರ ಪೊಲೀಸರೆದುರು ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸಲಿದ್ದಾನೆ. ನಮಗೆ ಕಾನೂನಿನಲ್ಲಿ ಸಂಪೂರ್ಣ ನಂಬಿಕೆಯಿದೆ. ಗುರುವಾರ ಆತನಿಗೆ ನೋಟಿಸ್ ಲಭಿಸಿತ್ತು,ಆದರೆ ತನಗೆ ಸೌಖ್ಯವಿಲ್ಲ ಎಂದು ಆತ ತಿಳಿಸಿದ್ದ" ಎಂದು ಅಜಯ್ ಮಿಶ್ರಾ ಶುಕ್ರವಾರ ಹೇಳಿದ್ದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.
ರವಿವಾರ ತಿಕುನಿಯಾದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ನಾಲ್ವರು ಪ್ರತಿಭಟನಾನಿರತ ರೈತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದು,ಹಲವಾರು ಜನರು ಗಾಯಗೊಂಡಿದ್ದರು.
ಬೆಳಿಗ್ಗೆ 10 ಗಂಟೆಗೆ ಠಾಣೆಗೆ ಹಾಜರಾಗುವಂತೆ ಆಶಿಷ್ ಗೆ ಸೂಚಿಸಲಾಗಿತ್ತು ಮತ್ತು ಎಂಟು ಸದಸ್ಯರ ತನಿಖಾ ತಂಡದ ನೇತೃತ್ವ ವಹಿಸಿರುವ ಡಿಐಜಿ ಉಪೇಂದ್ರ ಅಗರವಾಲ್ ಅವರಿಗೆ ಕಾಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದರು. ರೈತರು ದಾಖಲಿಸಿರುವ ಎಫ್ಐಆರ್ನಲ್ಲಿ ಆಶಿಷ್ರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದ್ದು,ಅವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ವಾಹನಗಳನ್ನು ರೈತರ ಗುಂಪಿನ ಮೇಲೆ ನುಗ್ಗಿಸಿದಾಗ ತನ್ನ ಥಾರ್ ವಾಹನದ ಎಡಬದಿಯ ಆಸನದಲ್ಲಿದ್ದ ಆಶಿಷ್ ಗುಂಡುಗಳನ್ನು ಹಾರಿಸಿದ್ದು,ಗುಡೇಟಿನಿಂದ ರೈತ ಸುಖ್ವಿಂದರ್ ಸಿಂಗ್ರ 22ರ ಹರೆಯದ ಪುತ್ರ ಗುರ್ವಿಂದರ್ ಮೃತಪಟ್ಟಿದ್ದಾನೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ಪ್ರಕರಣ ಗುರುವಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರುತ್ತಿದ್ದಂತೆ ಲವ ಕುಶ ಮತ್ತು ಆಶಿಷ್ ಪಾಂಡೆ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರೂ ಪತ್ರಕರ್ತ ಮತ್ತು ರೈತರ ಮೇಲೆ ಹರಿದಿದ್ದ ವಾಹನದಲ್ಲಿದ್ದರು ಎನ್ನಲಾಗಿದೆ ಎಂದು ಪೊಲೀಸರು ತಿಳಿಸಿದರು.







