ಪ್ರತಿಭಟನೆಗಳ ನಡುವೆಯೇ ಅದಾನಿ ಗ್ರೂಪ್ ಗೆ ಗುವಾಹಟಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಸ್ತಾಂತರ

ಗುವಾಹಟಿ,ಅ.8: ವ್ಯಾಪಕ ಪ್ರತಿಭಟನೆಗಳ ನಡುವೆಯೇ ಶುಕ್ರವಾರ ನಿರ್ಬಂಧಿತ ಕಾರ್ಯಕ್ರಮದಲ್ಲಿ ಗುವಾಹಟಿಯ ಲೋಕಪ್ರಿಯ ಬರ್ದೊಲಾಯ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ,ಅಭಿವೃದ್ಧಿ ಮತ್ತು ಕಾರ್ಯಾಚರಣೆಯನ್ನು ಅದಾನಿ ಸಮೂಹಕ್ಕೆ ಹಸ್ತಾಂತರಿಸಲಾಗಿದೆ.
ಈ ವರ್ಷದ ಪೂರ್ವಾರ್ಧದಲ್ಲಿ ನಡೆದಿದ್ದ ಬಿಡ್ ಪ್ರಕ್ರಿಯೆಯಲ್ಲಿ ಈಶಾನ್ಯ ಭಾರತದ ಈ ಏಕೈಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯ ಹಕ್ಕನ್ನು ಅದಾನಿ ಸಮೂಹವು ಗೆದ್ದುಕೊಂಡಿತ್ತು.
ಕಾಂಗ್ರೆಸ್ ಮತ್ತು ಅಸ್ಸಾಂ ಜಾತೀಯ ಪರಿಷದ್ ಸೇರಿದಂತೆ ಪ್ರತಿಪಕ್ಷಗಳು ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉದ್ಯೋಗಿಗಳ ಒಕ್ಕೂಟಗಳ ಪ್ರತಿನಿಧಿಗಳು ಅದಾನಿ ಸಮೂಹಕ್ಕೆ ವಿಮಾನ ನಿಲ್ದಾಣದ ಹಸ್ತಾಂತರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಲಕ್ನೋ, ಅಹ್ಮದಾಬಾದ್, ಜೈಪುರ, ತಿರುವನಂತಪುರ ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನೂ ನಿಯಂತ್ರಿಸುತ್ತಿರುವ ಅದಾನಿ ಸಮೂಹದ ವಿರುದ್ಧ ಕಳೆದ ಹಲವಾರು ತಿಂಗಳುಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ.
ಖಾಸಗಿ ಕಂಪನಿಯಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆ ನಿಯಂತ್ರಣವನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ ಆಗಸ್ಟ್ನಲ್ಲಿ ಸಹಿ ಅಭಿಯಾನವೊಂದನ್ನು ನಡೆಸಲಾಗಿದ್ದು,500ಕ್ಕೂ ಅಧಿಕ ಜನರು ಸಹಿಗಳನ್ನು ಹಾಕಿದ್ದರು.





